ಒಂದೇ ದಿನ ನಾಲ್ಕು ಪ್ರಕರಣ ದಾಖಲು, 7 ಜನರ ಬಂಧನ; ₹12,840 ನಗದು ಜಪ್ತಿ
ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಾಳಿ
ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಓರ್ವ ಮಟ್ಕಾ ಆರೋಪಿಯ ಬಂಧನ
ತಿಲಕವಾಡಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸರಾಯಿ ಮಾರಾಟದ ಮೇಲೆ ದಾಳಿ
ಗಾಂಜಾ ಸೇವನೆ ಪ್ರಕರಣ ಆರೋಪಿ ವಿರುದ್ಧ ಕ್ರಮ
ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಬೆಳಗಾವಿ ನಗರ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ಒಟ್ಟು 7 ಜನ ಆರೋಪಿತರನ್ನು ಬಂಧಿಸಿ, ₹12,840 ನಗದು ಮತ್ತು ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಕುಮಾರ ಕುರಳೆ ಮತ್ತು ಸಿಬ್ಬಂದಿ ಖಂಜಾರ ಗಲ್ಲಿ, ಸಫಾ ಜನರಲ್ ಸ್ಟೋರ್ ಬಳಿ ಕಲ್ಯಾಣ ಮಟ್ಕಾ ಆಡುತ್ತಿದ್ದ ಮೂವರು ಆರೋಪಿತರಾದ 1) ಮೊಹ್ಮದಶಫಿ ಮೋದಿನಸಾಬ ತಹಶೀಲ್ದಾರ (69), 2) ಜಾವೀದ ಮೊಹ್ಮದಶಪಿ ತಹಶೀಲ್ದಾರ (38), ಮತ್ತು 3) ಜುಬೇರ ಗಫಾರ್ ಅರಗಾ (48) ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹ 7,250 ನಗದು ಮತ್ತು ಓ.ಸಿ. ಸಂಖ್ಯೆ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಾಗಿದೆ.
ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ದೇಸೂರು ಗ್ರಾಮದ ನಾರಾಯಣ ಗುರವ ಅವರ ಜಮೀನಿನಲ್ಲಿ ಕಲ್ಯಾಣ ಮಟ್ಕಾ ಆಡುತ್ತಿದ್ದ ಅನೀಲಕುಮಾರ ಮಾರುತಿ ಭಜಂತ್ರಿ (32) ಅವರನ್ನು ಗ್ರಾಮೀಣ ಠಾಣೆಯ ಪಿಎಸ್‌ಐ ಶ್ರೀ. ಎಲ್ ಎಸ್ ಜೊಡಟ್ಟ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಈ ವೇಳೆ ₹ 1,750 ನಗದು ಮತ್ತು ಓ.ಸಿ. ಚೀಟಿಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ತಿಲಕವಾಡಿ ಪೊಲೀಸ್ ಠಾಣೆಯ ಪಿಐ. ಪರಶುರಾಮ ಎಸ್ ಪೂಜೇರಿ ಮತ್ತು ಸಿಬ್ಬಂದಿ ಗವಳ ಗಲ್ಲಿ, ಮಂಗಳವಾರ ಪೇಠದಲ್ಲಿ ತಮ್ಮ ಮನೆಯಲ್ಲೇ ಅಕ್ರಮವಾಗಿ ಸರಾಯಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ 1) ಅನೀಲ ನಂದು ಭವಾನಿ (52) ಮತ್ತು 2) ಆಕಾಶ ಅನೀಲ ಭವಾನಿ (28) ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹ 3,840 ಮೌಲ್ಯದ 90 ಎಂ.ಎಲ್‌ನ 96 ಬೆಂಗಳೂರು ವಿಟ್ಲ ಪೌಚ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಾಗಿದೆ.
ತಿಲಕವಾಡಿ ಠಾಣೆಯ ಪಿಎಸ್‌ಐ ವಿಶ್ವನಾಥ ಘಂಟಾಮಠ ಅವರು ಕೃಷಿ ಕಾಲನಿ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಸಂದೀಪ ಮಹಾಂತೇಶ ನೀಲನೂರ (28) ಎಂಬಾತನನ್ನು ಬಂಧಿಸಿ, ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ಒಟ್ಟಾರೆಯಾಗಿ, ಈ 4 ಪ್ರಕರಣಗಳಲ್ಲಿ 7 ಜನ ಆರೋಪಿತರನ್ನು ಬಂಧಿಸಿ, ₹ 12,840 ನಗದು ಹಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.