ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಚಿಕ್ಕಬಳ್ಳಾಪುರ ಜೆಡಿಎಸ್ ಕಾರ್ಯಕರ್ತರು ದೇವರಿಗೆ ಪ್ರಾರ್ಥನೆ ಮಾಡಿ, 108 ತೆಂಗಿನಕಾಯಿ ಒಡೆದು ಹರಕೆ ಹೊತ್ತರು.
ದೇವೇಗೌಡರ ಹೆಸರಲ್ಲಿ ಅರ್ಚನೆ: ಚಿಕ್ಕಬಳ್ಳಾಪುರ ನಗರ ಹೊರವಲಯದ ಸೋಲಾಲಪ್ಪ ದಿನ್ನೆಯ ವೀರಾಂಜನೇಯ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ದೇವೇಗೌಡರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಬಳಿ ಮಾಜಿ ಪ್ರಧಾನಿಗಳ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮುಕ್ತ ಮುನಿಯಪ್ಪ, ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ದೇವೇಗೌಡರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ನಿರ್ಮಲನಾಂದ ಸ್ವಾಮೀಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ದೇವೇಗೌಡರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಚೇತರಿಕೆಗಾಗಿ ಜೆ.ಕೆ.ಕೃಷ್ಣಾರೆಡ್ಡಿಯವರು ವೀರಾಂಜನೇಯನಿಗೆ 108 ತೆಂಗಿನಕಾಯಿ ಹರಕೆ ತೀರಿಸುವಂತೆ ಹೇಳಿದರು. ಅದರಂತೆ ಇಂದು ಪೂಜೆ ಮತ್ತು ಹರಕೆ ತೀರಿಸಲಾಗಿದೆ ಎಂದರು.
108 ತೆಂಗಿನಕಾಯಿ ಹರಕೆ: ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಂದ ಜೆಡಿಎಸ್ ಪಕ್ಷವಿದೆ. ರಾಜ್ಯಕ್ಕೆ ಕುಮಾರಸ್ವಾಮಿ ಅಗತ್ಯವಿದೆ. ಈ ಕಾರಣದಿಂದ ಅವರು ಆರೋಗ್ಯವಾಗಿರಬೇಕು. ಕುಮಾರಸ್ವಾಮಿಯವರು ಅನಾರೋಗ್ಯದಿಂದ ಇದ್ದಾಗ ದೇವರಲ್ಲಿ ಹರಕೆ ಹೊರಲಾಗಿತ್ತು. ಈಗ ಅವರ ಆರೋಗ್ಯ ಚೇರಿಕೆ ಆಗಿದೆ, ಹಾಗೆಯೇ ದೇವೇಗೌಡರ ಆರೋಗ್ಯ ಚೇತರಿಕೆಯಾಗಲಿ ಎಂಬ ಕಾರಣಕ್ಕೆ 108 ತೆಂಗಿನಕಾಯಿ ಹರಕೆ ತೀರಿಸಲಾಗಿತು ಎಂದರು.
ದೇವೇಗೌಡರ ಆರೋಗ್ಯ ವಿಚಾರಿಸಿದ ಯಡಿಯೂರಪ್ಪ: ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವೇಗೌಡರನ್ನು ಶನಿವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಆರೋಗ್ಯವಾಗಿದ್ದಾರೆ, ಆತಂಕ ಬೇಡ: ದೇವೇಗೌಡರು ಆರೋಗ್ಯವಾಗಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ತಿಳಿಸಿದ್ದರು. ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ತಂದೆ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ್ದ ಹೆಚ್ಡಿಕೆ, ಮೂರ್ನಾಲ್ಕು ದಿನದಲ್ಲಿ ತಂದೆಯವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಆತಂಕಪಡುವ ಅಗತ್ಯತೆ ಇಲ್ಲ ಎಂದಿದ್ದರು.
ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯದ ಮೇಲೆ ವೈದ್ಯರ ವಿಶೇಷ ತಂಡ ನಿಕಟವಾಗಿ ನಿಗಾ ವಹಿಸಿದ್ದು, ಎರಡು ಮೂರು ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿತ್ತು.