ಹುಬ್ಬಳ್ಳಿ: ಸೆ. 2025ರಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಣೆ ಮತ್ತು ಆದಾಯದಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ. ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಸರಕು ಸಾಗಣೆಯನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ನಿರಂತರ ಮತ್ತು ಬಲವಾದ ಬೆಳವಣಿಗೆಯ ಸೂಚಕವಾಗಿದೆ. ಈ ಅವಧಿಯಲ್ಲಿ ನೈಋತ್ಯ ರೈಲ್ವೆ ಒಟ್ಟು 4.17 ಮಿಲಿಯನ್ ಟನ್ (MT) ಮೂಲ ಸರಕುಗಳನ್ನು ಲೋಡ್ ಮಾಡಿದ್ದು, ರೈಲ್ವೆ ಮಂಡಳಿಯ 4.15 MT ಗುರಿಯನ್ನು ಮೀರಿಸಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ದಾಖಲಾದ 3.3 MTಗೆ ಹೋಲಿಸಿದರೆ ಶೇ.25%ರಷ್ಟು ಗಮನಾರ್ಹ ಏರಿಕೆಯಾಗಿದ್ದು, 2023-24ರಲ್ಲಿ ದಾಖಲಾದ ಅತ್ಯುತ್ತಮ 4.1 MT ದಾಖಲೆಯನ್ನು ಮೀರಿಸಿದೆ.

ಈ ಸಾಧನೆ ಮುಖ್ಯ ಸರಕುಗಳಲ್ಲಿ ಕಂಡುಬಂದ ಸುಧಾರಿತ ಕಾರ್ಯಕ್ಷಮತೆಯಿಂದ ಸಾಧ್ಯವಾಗಿದೆ. ಕಬ್ಬಿಣದ ಅದಿರು ಲೋಡಿಂಗ್ ಶೇ.2.8 ಏರಿಕೆಯಾಗಿ 1.583 MTನಿಂದ 1.628 MTಗೆ ತಲುಪಿದೆ. ಉಕ್ಕಿನ ಲೋಡಿಂಗ್ ಶೇ.53.3ರಷ್ಟು ಏರಿಕೆಯಾಗಿ 0.591 MTನಿಂದ 0.906 MTಗೆ ತಲುಪಿದೆ. ಕಲ್ಲಿದ್ದಲು ಲೋಡಿಂಗ್ ಶೇ.45.8 ಹೆಚ್ಚಾಗಿ 0.511 MTನಿಂದ 0.745 MT ಆಗಿದೆ. ಉಕ್ಕಿನ ಸ್ಥಾವರಗಳಿಗೆ ಕಚ್ಚಾ ವಸ್ತು (RMSP) ಲೋಡಿಂಗ್ ಶೇ.306ರಷ್ಟು ಅಸಾಧಾರಣ ಏರಿಕೆಯನ್ನು ಕಂಡು 0.083 MTನಿಂದ 0.337 MT ಆಗಿದೆ. ರಸಗೊಬ್ಬರ ಲೋಡಿಂಗ್ ಶೇ.29.8 ಏರಿಕೆಯಾಗಿ 0.109 MT ತಲುಪಿದ್ದು, ಕಂಟೇನರ್ ಸಂಚಾರವೂ ಶೇ.37.9 ಏರಿಕೆಯಾಗಿ 0.058 MTನಿಂದ 0.080 MT ಆಗಿದೆ.
ಪ್ರಯಾಣಿಕರ ಸೇವೆಗಳ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದೆ. ಸೆಪ್ಟೆಂಬರ್ 2025ರಲ್ಲಿ ನೈಋತ್ಯ ರೈಲ್ವೆ ₹282 ಕೋಟಿ ಪ್ರಯಾಣಿಕರ ಆದಾಯವನ್ನು ಗಳಿಸಿದ್ದು, ಇದು 2024ರ ಸೆಪ್ಟೆಂಬರ್‌ನ ₹264.83 ಕೋಟಿಗಿಂತ ಶೇ.6.38 ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆಯು ಕೂಡ 14.34 ಮಿಲಿಯನ್‌ಗೆ ಏರಿದ್ದು, ಇದು ಕಳೆದ ವರ್ಷದ 13.37 ಮಿಲಿಯನ್ ಪ್ರಯಾಣಿಕರಿಗಿಂತ ಶೇ.7.26 ಹೆಚ್ಚಳವಾಗಿದೆ.

ವಲಯದ ಒಟ್ಟು ಆದಾಯದಲ್ಲಿ ಸರಕು ಸಾಗಣೆ ವಿಭಾಗ ಪ್ರಮುಖ ಪಾತ್ರವಹಿಸಿದೆ. ಸರಕು ಸಾಗಣೆ ಆದಾಯವು ₹427.50 ಕೋಟಿಗೆ ತಲುಪಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ದಾಖಲಾದ ಆದಾಯಕ್ಕಿಂತ ಶೇ.35.78 ( ₹314.85 ಕೋಟಿ) ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ವಲಯದ ಅತ್ಯುತ್ತಮ ಮಾಸಿಕ ಸರಕು ಸಾಗಣೆಯಾಗಿದೆ.
ಒಟ್ಟಾರೆಯಾಗಿ ಸೆಪ್ಟೆಂಬರ್ 2025ರವರೆಗೆ ನೈಋತ್ಯ ರೈಲ್ವೆ ಸರಕು ಸಾಗಣೆಯಿಂದ ₹2,578 ಕೋಟಿ ಆದಾಯ ಗಳಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.27.29 (₹2,025.33 ಕೋಟಿ) ಹೆಚ್ಚಾಗಿದೆ. ಅದೇ ಅವಧಿಯಲ್ಲಿ ಪ್ರಯಾಣಿಕರ ಆದಾಯ ₹1,650 ಕೋಟಿಗೆ ಏರಿದ್ದು, ಕಳೆದ ವರ್ಷಕ್ಕಿಂತ ಶೇ.2.68 (₹1,606.56 ಕೋಟಿ) ಹೆಚ್ಚಾಗಿದೆ. ಸೆಪ್ಟೆಂಬರ್ 2025ರವರೆಗೆ ಒಟ್ಟು 87.99 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದ್ದು, 2024ರ ಇದೇ ಅವಧಿಯ 82.38 ಮಿಲಿಯನ್ ಪ್ರಯಾಣಿಕರಿಗಿಂತ ಶೇ.6.81 ಹೆಚ್ಚಳವಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.