ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳುವ ಕುರಿತಂತೆ ಒಪ್ಪಂದದ ಐತೀರ್ಪು ರಚಿಸಲು ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಲಮಟ್ಟಿ ಜಲಾಶಯ ಎತ್ತರವನ್ನು 519.60 ಮೀಟರ್ನಿಂದ 524.256 ಮೀಟರ್ವರೆಗೆ ಎತ್ತರಿಸಲು ಅನುಮತಿ ನೀಡಲಾಗಿದೆ. ಇದರಿಂದ ಹಿನ್ನೀರಿನಲ್ಲಿ 75,563 ಎಕರೆ ಭೂಮಿ ಮುಳುಗಡೆಯಾಗಲಿದೆ. ಈ ಭೂಮಿಗೆ ಒಂದೇ ಹಂತದಲ್ಲಿ ಒಪ್ಪಂದದ ದರ ಅಥವಾ ಭೂ ಖರೀದಿ ಮೂಲಕ ಭೂಸ್ವಾಧೀನ ಮಾಡಲು ಆದೇಶಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಗೆ ಅಗತ್ಯವಿರುವ ಮುಳುಗಡೆ ಜಮೀನು ಮತ್ತು ಕಾಲುವೆ ನಿರ್ಮಾಣಕ್ಕೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದದ ಐತೀರ್ಪು ದರದಂತೆ ಏಕರೂಪ ದರ ನಿಗದಿ ಪಡಿಸಲಾಗಿದೆ.
ಮುಳುಗಡೆ ಜಮೀನುಗಳ ಭೂಸ್ವಾಧೀನತೆಗಾಗಿ:
ಖುಷ್ಕಿ (ಒಣ) ಭೂಮಿಗೆ: ಪ್ರತಿ ಎಕರೆಗೆ 30 ಲಕ್ಷ ರೂ.
ತರಿ ಜಮೀನಿಗೆ (ನೀರಾವರಿ): ಪ್ರತಿ ಎಕರೆಗೆ 40 ಲಕ್ಷ ರೂ.
ಕಾಲುವೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಎಷ್ಟು ದರ ನಿಗದಿ?
ಖುಷ್ಕಿ (ಒಣ) ಭೂಮಿಗೆ: ಪ್ರತಿ ಎಕರೆಗೆ 25 ಲಕ್ಷ ರೂ.
ತರಿ ಜಮೀನಿಗೆ (ನೀರಾವರಿ): ಪ್ರತಿ ಎಕರೆಗೆ 30 ಲಕ್ಷ ರೂ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಗೆ ಅಗತ್ಯವಿರುವ ಮುಳುಗಡೆ ಹೊಂದುವ ಮತ್ತು ಇತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ನೇರ ಖರೀದಿ / ಒಪ್ಪಂದ ದರ (Direct Purchase/Consent Award) ಮೂಲಕ ಭೂ ಪರಿಹಾರವನ್ನು ಪಾವತಿಸಲು ಜಲ ಸಂಪನ್ಮೂಲ ಇಲಾಖೆಯು ಮಾರ್ಗಸೂಚಿ/ನಿಯಮಾವಳಿಗಳನ್ನು ರೂಪಿಸಲಿದೆ. ಈ ಸಂಬಂಧ ಜಲಸಂಪನ್ಮೂಲ ಇಲಾಖೆಯು ಕಂದಾಯ ಇಲಾಖೆಯೊಂದಿಗೆ ಸಮಾಲೋಚಿಸಿ ಪ್ರತ್ಯೇಕ ಆದೇಶವನ್ನು ಹೊರಡಿಸಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಯಡಿಯ ಭೂಸ್ವಾಧೀನ ಮತ್ತು ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ರಮಕ್ಕೆ ಅಗತ್ಯವಿರುವ ಹೆಚ್ಚುವರಿ ಸುಮಾರು ರೂ. 75,000 ಕೋಟಿ ಮೊತ್ತವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಭರಿಸಲು ಸುಮಾರು ರೂ.18000 ಕೋಟಿ ವಾರ್ಷಿಕ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಆಯವ್ಯಯದಲ್ಲಿ ಸೂಕ್ತವಾಗಿ ಕಲ್ಪಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸೆ.16 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳಿಗಾಗಿ ಅವಶ್ಯ ಇರುವ ಜಮೀನಿಗೆ ಪರಿಹಾರ ದರ ನಿಗದಿಗೊಳಿಸಿ ನಿರ್ಧಾರ ತೆಗೆದುಕೊಂಡಿತ್ತು.
ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯಡಿ ಮುಳುಗಡೆಯಾಗುವ ಪ್ರತಿ ಎಕರೆ ನೀರಾವರಿ ಜಮೀನಿಗೆ 40 ಲಕ್ಷ ರೂ. ಹಾಗೂ ಒಣ ಜಮೀನಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಮತ್ತು ಕಾಲುವೆಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ ಪೈಕಿ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 30 ಲಕ್ಷ ರೂ ಹಾಗೂ ಒಣ ಜಮೀನಿಗೆ ಪ್ರತಿ ಎಕರಿಗೆ 25 ಲಕ್ಷ ರೂ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.
ಈ ಯೋಜನೆಗೆ ಒಟ್ಟು 1,33,867 ಎಕರೆ ಜಮೀನು ಬೇಕಿದೆ. 75,563 ಎಕರೆ ಜಮೀನು ಮುಳುಗಡೆಯಾಗಲಿದೆ. 51,837 ಎಕರೆ ಕಾಲುವೆ ನಿರ್ಮಾಣಕ್ಕೆ ಬೇಕಾಗಿದೆ. ರೈತರ ಪುನರ್ವಸತಿ ಹಾಗೂ ಪುನರ್ವವ್ಯಸ್ಥೆ ಕಾರ್ಯಗಳಿಗೆ 6469 ಎಕರೆಗಳ ಅವಶ್ಯಕತೆಯಿದೆ. ಇದರಿಂದ ಸುಮಾರು 20 ಗ್ರಾಮಗಳು, ಕೆಲವು ಪಟ್ಟಣ ವಾರ್ಡ್ಗಳು ಮುಳುಗಡೆಯಾಗುತ್ತಿದ್ದು, ಒಟ್ಟು 1,33,867 ಎಕರೆಗೆ ಭೂಸ್ವಾಧೀನ ಪರಿಹಾರ ನೀಡಲಾಗುತ್ತದೆ. ಒಟ್ಟಾರೆ ಈ ಯೋಜನೆಗೆ ಸುಮಾರು 70 ಸಾವಿರ ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ.