ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಪಾಡು ಹೇಳತೀರದಾಗಿದೆ. ಭೂಮಿ ನೀಡಿದ ರೈತರಿಗೆ ಹಣ ನೀಡಿ, ಕುಟುಂಬಕ್ಕೊಂದು ನಿವೇಶನ ನೀಡುವ ಕುರಿತು ಹಿಂದಿನ ಸರ್ಕಾರ ಘೋಷಿಸಿತ್ತು. ಆದರೆ ಕಾಮಗಾರಿ ಮುಕ್ತಾಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ, ಎರಡು ವರ್ಷವಾದರೂ ಕೆಹೆಚ್ಬಿಯಿಂದ ರೈತರಿಗೆ ಒಂದು ನಿವೇಶನವೂ ಸಿಕ್ಕಿಲ್ಲ.
ಜಿಲ್ಲಾಡಳಿತ ನಿವೇಶನ ನೀಡದೇ ಹೋದಾಗ ರೈತರು ವಿಮಾನ ನಿಲ್ದಾಣದ ಉದ್ಘಾಟನೆಗೂ ಮುನ್ನ ಧರಣಿ ಕೈಗೊಂಡಿದ್ದರು. ಇದರಿಂದ ಎಚ್ಚೆತ್ತ ಅಂದಿನ ಸರ್ಕಾರ, ಉದ್ಘಾಟನೆಗೆ ಅವಕಾಶ ಮಾಡಿ ಕೊಡಿ, ನಾವು ನಿಮಗೆ ಖಂಡಿತ ನಿವೇಶನ ನೀಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಒಬ್ಬರಿಗೂ ನಿವೇಶನ ಮಂಜೂರಾಗಿಲ್ಲ ಎಂಬುದು ರೈತರ ದೂರು.
ಈ ಹಿನ್ನೆಲೆಯಲ್ಲಿ ರೈತರು ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ಮೂರು ತಿಂಗಳ ಹಿಂದೆ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಆದರೆ ಅಧಿಕಾರಿಗಳು ಕುಂಟುನೆಪ ಹೇಳುತ್ತಿದ್ದಾರೆ ಅಂತಾರೆ ರೈತರು.
ಅಧಿಕಾರಿಗಳು ಕೆಹೆಚ್ಬಿಗೆ ಹಣ ನೀಡದ ಕಾರಣ ಯಾರಿಗೂ ನಿವೇಶನ ಸಿಗುತ್ತಿಲ್ಲ. ಇದರಿಂದ ಬೇಸತ್ತ ರೈತರು ಅಕ್ಟೋಬರ್ 9ರಿಂದ ವಿಮಾನ ನಿಲ್ದಾಣದೆದುರು ಅನಿರ್ದಿಷ್ಟಾವಧಿ ಧರಣಿಗೆ ತಯಾರಾಗುತ್ತಿದ್ದಾರೆ. ಮೊದಲು ಶಾಂತಿಯುತ ಪ್ರತಿಭಟನೆ ನಡೆಸಿ, ನಂತರವೂ ನಿವೇಶನ ನೀಡದೇ ಹೋದರೆ, ವಿಮಾನ ನಿಲ್ದಾಣದ ಒಳಗೆಯೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೋರಾಟಗಾರರ ಕೃಷ್ಣಪ್ಪ ಮಾತನಾಡಿ, “ಸೋಗಾನೆಯ ವಿಮಾನ ನಿಲ್ದಾಣಕ್ಕೆ 2006-07ರಲ್ಲಿ ಭೂಮಿ ನೀಡಿದ ನಮಗೆ ನಿವೇಶನ ನೀಡದೆ ಸತಾಯಿಸುತ್ತಿದ್ದಾರೆ. ರೈತರು ನಿವೇಶನಕ್ಕಾಗಿ ಹೈಕೋರ್ಟ್ಗೆ ಹೋಗಿ ನಿವೇಶನ ನೀಡಬೇಕೆಂದು ಆದೇಶ ಮಾಡಿಸಿಕೊಂಡು ಬಂದರೂ ಸಹ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಿಂದೆ ಉದ್ಘಾಟನೆಗೆ ಬಂದಾಗ ನಿವೇಶನಕ್ಕಾಗಿ ಧರಣಿ ಕುಳಿತು ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡಲ್ಲ ಎಂದಾಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರುಗಳು ಒಡಂಬಡಿಕೆ ಮಾಡಿಕೊಂಡು ರೈತರಿಗೆ ನಿವೇಶನ ನೀಡಿ ಎಂದು ಡಿಸಿಗೆ ಹಸ್ತಾಂತರ ಮಾಡಿದರು. ನಂತರ ಕೋರ್ಟ್ ಸಹ ನಿವೇಶನ ಹಂಚಿಕೆ ಮಾಡಬೇಕೆಂದು ಹೇಳಿತ್ತು. ಆದರೂ ಸಹ ಜಿಲ್ಲಾಧಿಕಾರಿಗಳು ನಮಗೆ ನಿವೇಶನ ನೀಡುವ ಕುರಿತು ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 9ರಿಂದ ವಿಮಾನ ನಿಲ್ದಾಣದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.
ರೈತ ಶಿವಕುಮಾರ್ ಮಾತನಾಡಿ, “ವಿಮಾನ ನಿಲ್ದಾಣ ಉದ್ಘಾಟನೆಗೆ ನರೇಂದ್ರ ಮೋದಿಯವರು ಬರ್ತಾರೆಂದು ನಾವು ಧರಣಿ ಕುಳಿತಿದ್ದೆವು. ಆ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರು ನಿಮಗೆ ನಿವೇಶನ ಕೊಡಿಸುತ್ತೇನೆ, ಇಲ್ಲವೇ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದರು. ನಂತರ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೆಹೆಚ್ಬಿಗೆ ನಿವೇಶನ ನೀಡಲು 34 ಕೋಟಿ ರೂ. ನೀಡುವುದಾಗಿ ಹೇಳಿ 5 ಕೋಟಿ ರೂ ಕೊಟ್ಟಿರುವ ಲೆಟರ್ ತೋರಿಸಿದಾಗ ಎಲ್ಲಾ ರೈತರು ಒಪ್ಪಿಕೊಂಡರು. ಕಳೆದ ಮೂರು ತಿಂಗಳ ಹಿಂದೆ ನಿವೇಶನ ನೀಡಬೇಕೆಂದು ಕೋರ್ಟ್ ಕೂಡಾ ಆದೇಶಿಸಿದೆ. ಆದರೆ ಈಗ ಕೆಹೆಚ್ಬಿಯವರು ನಮಗೆ ಪೂರ್ಣ ಪ್ರಮಾಣದ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ತಿಳಿಸಿದರು.