ರಾಮನಗರ: ಬಿಗ್ಬಾಸ್ ಕನ್ನಡ ಸೀಸನ್ – 12ರ ಶೋ ಆರಂಭವಾದ ಎರಡೇ ವಾರದಲ್ಲಿ ದೊಡ್ಡನೆಗೆ ಬೀಗ ಮುದ್ರೆ ಬಿದ್ದಿದೆ. ಬಿಗ್ಬಾಸ್ ಸ್ಪರ್ಧಾಳನ್ನು ಈಗಲ್ ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ.
ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಬಿಗ್ ಬಾಸ್ ಮನೆಯಿದೆ. ಮಾಲಿನ್ಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಆರೋಪದಡಿ ಬಿಡದಿಯ ಬಳಿಯ ಜಾಲಿವುಡ್ ಸ್ಟುಡಿಯೋ & ಅಡ್ವೆಂಚರ್ಸ್ ಪಾರ್ಕ್ ಬಂದ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ನಿತ್ಯ ಜಲಕ್ರೀಡೆಗೆ 2.50 ಲಕ್ಷ ಲೀಟರ್ ನೀರು ಬಳಕೆಯಾಗುತ್ತಿದ್ದು, ನಿಯಮಗಳ ಪ್ರಕಾರ ನೀರನ್ನು ಶುದ್ದೀಕರಣ ಮಾಡಿ ಪುನರ್ಬಳಕೆ ಮಾಡಬೇಕು. ಆದರೆ ಪುನರ್ಬಳಕೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ ಹಾಗೂ ಹಸಿ ಕಸ-ಒಣ ಕಸ ವಿಂಗಡಿಸದೇ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಹಾಗೂ ತ್ಯಾಜ್ಯಮಿಶ್ರಿತ ನೀರನ್ನು ಚರಂಡಿಗೆ ಬಿಟ್ಟಿರುವ ಆರೋಪ ಮಾಡಲಾಗಿದೆ.
ಇಂದು ರಾತ್ರಿಯೇ ಬಿಗ್ ಬಾಸ್ ಮನೆಯನ್ನು ಖಾಲಿ ಮಾಡಬೇಕು ಎನ್ನುವ ಅಧಿಕಾರಿಗಳ ಸೂಚನೆ ಮೇರೆಗೆ ಆಯೋಜಕರು ತುರ್ತು ಸಭೆ ನಡೆಸಿದ್ದಾರೆ. ಇದರಿಂದ ಬಿಗ್ ಬಾಸ್ ಮನೆಯಿಂದ ಎಲ್ಲಾ ಸ್ಪರ್ಧಿಗಳು, ಸಿಬ್ಬಂದಿಗಳನ್ನು ಬಿಡದಿಯ ಈಗಲ್ ಟನ್ ರೆಸಾರ್ಟ್ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಮನೆಯೊಳಗೆ ಹೋಗುವ ಮುನ್ನವೇ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಜಾಲಿವುಡ್ ಸ್ಟುಡಿಯೋಸ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಸ್ಪರ್ಧಿಗಳು ಹಾಗೂ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಕಾರುಗಳ ಮೂಲಕ ಸ್ಪರ್ಧಿಗಳನ್ನ ಖಾಸಗಿ ಹೊಟೇಲ್‌ಗೆ ರವಾನಿಸಲಾಗಿದೆ. ಒಂದು ವೇಳೆ ಸಮಸ್ಯೆ ಬಗೆಹರಿದರೆ ಮತ್ತೆ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಕರೆತರಲಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಬಿಗ್ ಬಾಸ್ ಪ್ರಸಾರ ನಾಳೆಯಿಂದ ಇರುತ್ತಾ ಅಥವಾ ಅರ್ಧದಲ್ಲೇ ಶೋ ನಿಲ್ಲುತ್ತಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.