ಬೆಳಗಾವಿ: ಸಿಎಂ ಸಿದ್ದರಾಮಯ್ಯ ಬೆಳಗಾವಿಗೆ ಬರುವ ಮುನ್ನಾ ದಿನವೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜಿಲ್ಲೆಯ ವಿವಿಧ ಕಡೆ ಬೆಳೆ ಹಾನಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ, ರೈತರ ಸಮಸ್ಯೆ ಆಲಿಸಿದ ಅವರು, ರೈತರ ಸಂಕಷ್ಟ ಆಲಿಸಲು ಬಾರದೇಬೆಳಗಾವಿಗೆ ಬಿರಿಯಾನಿ ತಿನ್ನಲು ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಬೈಲಹೊಂಗಲ ತಾಲೂಕಿನ ನೇಸರಗಿ, ನಾಗನೂರ ಮತ್ತು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ರೈತರ ಜಮೀನುಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ತಂಡ ಭೇಟಿ ನೀಡಿತು. ಬಿಜೆಪಿ ನಾಯಕರ ಮುಂದೆ ಗಜ್ಜರಿ, ಸೋಯಾಬಿನ್ ಬೆಳೆದಿದ್ದ ರೈತರು ತಮ್ಮ ಸಮಸ್ಯೆ ಹೇಳಿಕೊಂಡರು. ಸಾಲಶೂಲ ಮಾಡಿ ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದೆವು. ಈಗ ನೋಡಿದರೆ ಎಲ್ಲವೂ ನಾಶವಾಗಿದೆ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಪುಣ್ಯಕಟ್ಟಿಕೊಳ್ಳಿ ಎಂದು ಕೇಳಿಕೊಂಡರು
ರೈತರೊಂದಿಗೆ ಸಮಾಲೋಚನೆ ಮಾಡುತ್ತಿದ್ದ ವೇಳೆ ಮಾತನಾಡಿದ ಆರ್. ಅಶೋಕ್, ‘ರಾಜ್ಯ ಸರ್ಕಾರದ ಬಳಿ ರೈತರಿಗೆ ನೀಡಲು ಹಣವಿಲ್ಲ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಿದೆ. ಅದನ್ನು ಗ್ಯಾರಂಟಿ ಯೋಜನೆಗೆ ಸರ್ಕಾರ ಬಳಸಿಕೊಂಡಿದೆ. ಕೇಂದ್ರ ಸರ್ಕಾರ ಪ್ರತಿ 4 ತಿಂಗಳಿಗೊಮ್ಮೆ ಎನ್‌ಡಿಆರ್‌ಎಫ್ ಅನುದಾನ ಕೊಡುತ್ತದೆ. ವಿಪತ್ತು ನಿರ್ವಹಣೆಗೆ ಎಲ್ಲ ರಾಜ್ಯಗಳಿಗೂ ಹಣ ಕೊಡುತ್ತಾರೆ. ಹಾಗೆ ಕೊಟ್ಟ ಅನುದಾನ ಈಗಾಗಲೇ ರಾಜ್ಯ ಸರ್ಕಾರಕ್ಕೆ ಬಂದಿದೆ. ಆದರೆ, ಇವರು ಆ ಹಣ ಜನರಿಗೆ ಕೊಟ್ಟಿಲ್ಲ. ಅದನ್ನು ತಮ್ಮ ತಮ್ಮ ಫ್ರಿ… ಫ್ರಿ..ಗೆ ಕೊಟ್ಟು ಬಿಟ್ಟಿದ್ದಾರೆ. ಈಗ ಕೇಂದ್ರ ಸರ್ಕಾರ ಕೊಡಬೇಕಿರುವುದು ಹೆಚ್ಚುವರಿ ಅನುದಾನ. ಅದಕ್ಕಾಗಿ ಇವರು ಹಾನಿಯ ವರದಿ ಸಲ್ಲಿಸಬೇಕು. ವರದಿ ಸಲ್ಲಿಸದೆಯೇ ಕೇಂದ್ರ ಸರ್ಕಾರ ಹಣ ಕೊಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.