ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ 1,01,603 ಕೋಟಿ ರೂ. ತೆರಿಗೆ ಪಾಲನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 3,705 ಕೋಟಿ ರೂ ಹಂಚಿಕೆ ಮಾಡಲಾಗಿದೆ.
ರಾಜ್ಯಗಳ ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಬಂಡವಾಳ ವೆಚ್ಚ ವೇಗಗೊಳಿಸಲು ಹಾಗೂ ಮುಂಬರುವ ಹಬ್ಬಗಳ ಋತುವಿನ ಹಿನ್ನೆಯಲ್ಲಿ ಕೇಂದ್ರ ಅಕ್ಟೋಬರ್ 1 ರಂದು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ 1,01,603 ಕೋಟಿ ರೂ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 10ರಂದು ಬಿಡುಗಡೆಯಾಗಬೇಕಿದ್ದ ಸಾಮಾನ್ಯ ಮಾಸಿಕ 81,735 ಕೋಟಿ ರೂ.ಗಳ ತೆರಿಗೆ ಜೊತೆಗೆ ಹೆಚ್ಚುವರಿಯಾಗಿ 1,01,603 ಕೋಟಿ ರೂ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಹಂಚಿಕೆಯು ಸಹಕಾರಿ ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಅನುಗುಣವಾಗಿದೆ. 2047ರ ವೇಳೆಗೆ ‘ವಿಕಸಿತ ಭಾರತ’ ರೂಪಿಸುವ ಗುರಿ ಹೊಂದಲಾಗಿದೆ. ಸದ್ಯ, ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ.41ರಷ್ಟು ಹಣವನ್ನು ರಾಜ್ಯಗಳಿಗೆ ಕಂತುಗಳಲ್ಲಿ ಹಂಚಿಕೆ ಮಾಡುತ್ತದೆ.

ಯಾವ ರಾಜ್ಯಗಳಿಗೆ ಎಷ್ಟು?: ಕರ್ನಾಟಕಕ್ಕೆ 3,705 ಕೋಟಿ ರೂ, ಉತ್ತರ ಪ್ರದೇಶಕ್ಕೆ 18,227 ಕೋಟಿ ರೂ, ಬಿಹಾರ 10219 ಕೋಟಿ ರೂ, ಮಧ್ಯಪ್ರದೇಶಕ್ಕೆ 7976 ಕೋಟಿ ರೂ, ಪಶ್ಚಿಮ ಬಂಗಾಳಕ್ಕೆ 7644 ಕೋಟಿ ರೂ, ಆಂಧ್ರ ಪ್ರದೇಶಕ್ಕೆ 4112 ಕೋಟಿ ರೂ.
ಸೆಪ್ಟೆಂಬರ್‌ನಲ್ಲಿ ₹1.89 ಲಕ್ಷ ಕೋಟಿ ಸಂಗ್ರಹ: ಇನ್ನು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸಿದ ಬಳಿಕ ದೇಶದಲ್ಲಿ ಸರ್ಕಾರಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಅದು ಸುಳ್ಳಾಗಿದೆ. ಮಾರಾಟ ಏರಿಕೆಯಾಗಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ ಎಂಬುದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿದೆ.
ಬುಧವಾರ ಪ್ರಕಟವಾದ ಸರ್ಕಾರಿ ಅಂಕಿಅಂಶಗಳಂತೆ, ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಶೇ.9.1 ರಷ್ಟು ಏರಿಕೆಯಾಗಿದ್ದು, 1.89 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಅಂದರೆ, ಜಿಎಸ್‌ಟಿ ದರ ಪರಿಷ್ಕರಣೆಗೂ ಹಿಂದಿನ ತಿಂಗಳಾದ ಆಗಸ್ಟ್ನಲ್ಲಿ ಸಂಗ್ರಹಣೆಯಾದ ತೆರಿಗೆಗಿಂತ 3 ಲಕ್ಷ ಕೋಟಿ ರೂಪಾಯಿ ಹೆಚ್ಚು.
2024ರ ಸೆಪ್ಟೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.73 ಲಕ್ಷ ಕೋಟಿ ರೂಪಾಯಿ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ 16 ಲಕ್ಷ ಕೋಟಿ ರೂಪಾಯಿ ಅಧಿಕ. ಒಟ್ಟು ದೇಶೀಯ ಆದಾಯದಲ್ಲಿ ಶೇ.6.8ರಷ್ಟು ಏರಿಕೆಯಾಗಿ 1.36 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದರೆ, ಆಮದುಗಳಿಂದ ಬರುವ ತೆರಿಗೆಯಲ್ಲಿ ಶೇ.15.6ರಷ್ಟು ಏರಿಕೆಯಾಗಿ 52,492 ಕೋಟಿ ರೂಪಾಯಿ ಬಂದಿದೆ ಎಂದು ಕೇಂದ್ರ ತಿಳಿಸಿದೆ.