ಕಾರವಾರ(ಉತ್ತರ ಕನ್ನಡ): ಕಳೆದ ಆರು ತಿಂಗಳಿನಿಂದ ಕಾರ್ಗತ್ತಲಲ್ಲಿ ಮುಳುಗಿದ್ದ ಕುಗ್ರಾಮವೊಂದರ ಜನರ ಗೋಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಅಧಿಕಾರಿಗಳ ಕಿವಿ ತಲುಪಿದೆ. ಇಂಟರ್ನೆಟ್ ಇಲ್ಲದ ಕಾರಣ, ಮೂಲಭೂತ ಸೌಕರ್ಯದಿಂದ ವಂಚಿರಾದ ಗ್ರಾಮಸ್ಥರನ್ನು ಅಧಿಕಾರಿಗಳು ಪಕ್ಕದ ಗೋವಾ ರಾಜ್ಯಕ್ಕೆ ಕೊಂಡೊಯ್ದು ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.
ಹೌದು, ಕಳೆದ ಆರು ತಿಂಗಳಿನಿಂದ ಕಾರ್ಗತ್ತಲಲ್ಲಿ ಮುಳುಗಿದ್ದ ಕಾರವಾರ ತಾಲೂಕಿನ ಘೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮರಗಾಂವ್ ಎಂಬ ಕುಗ್ರಾಮದ ಜನರ ಗೋಳು ಇದೀಗ ಅಧಿಕಾರಿಗಳ ಗಮನಕ್ಕೆ ಬಂದಿದೆ. ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿದ್ದರೂ, ವಾಸ್ತವವಾಗಿ ಗೋವಾ ಮಾರ್ಗವಾಗಿ 125 ಕಿ.ಮೀ ಸುತ್ತಿ ತಲುಪಬೇಕಾದ ಕುಗ್ರಾಮ ಕಮ್ಮರಗಾಂವ್ ಗ್ರಾಮಸ್ಥರ ಬದುಕು ಕಳೆದ ಆರು ತಿಂಗಳಿಂದ ಕತ್ತಲಲ್ಲಿದೆ. ಮಳೆಗಾಲ ಪೂರ್ವದಲ್ಲಿ ಮರಗಳು ಧರೆಗುರುಳಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ಸಂಪರ್ಕ ಕಡಿತಗೊಂಡಿದ್ದು, ನಿತ್ಯವೂ ಗ್ರಾಮಸ್ಥರು ಕಾರ್ಗತ್ತಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್ ಮಾತ್ರವಲ್ಲದೆ ನೀರು, ರಸ್ತೆ, ನೆಟ್‌ವರ್ಕ್ ಮತ್ತು ಶಾಲೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಇಲ್ಲಿನ ಬಡ ಕುಟುಂಬಗಳು ಬದುಕು ದೂಡುತ್ತಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ತಂಡ ಎರಡು ದಿನದ ಹಿಂದೆ ಕಮ್ಮರಗಾಂವ್‌ಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸಿತ್ತು. ಅಲ್ಲದೆ ಸಮೀಕ್ಷೆಗೆ ಪಕ್ಕದ ಗೋವಾ ರಾಜ್ಯಕ್ಕೆ ತೆರಳಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದ ಅಧಿಕಾರಿಗಳು, ಗ್ರಾಮದ ಪ್ರತಿ ಕುಟುಂಬದ ಮುಖ್ಯಸ್ಥರನ್ನು ಗೋವಾದ ನೇತ್ರಾವಳಿಗೆ ಕರೆದೊಯ್ದು ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಒಟ್ಟು 34 ಕುಟುಂಬಗಳ ಸಮೀಕ್ಷೆ ನಡೆಸಿದ ನಂತರ, ಮೂಲಭೂತ ಸೌಕರ್ಯವೇ ಇಲ್ಲದ ಇಲ್ಲಿನ ಜನರ ಗೋಳು ಕೇಳಿ ಅಧಿಕಾರಿಗಳೇ ಮರುಕ ವ್ಯಕ್ತಪಡಿಸಿದ್ದಾರೆ. ಬಹುತೇಕರು ಸ್ವಂತ ಜಮೀನು ಇಲ್ಲದ ಬಡ ಕುಟುಂಬಗಳೇ ಆಗಿವೆ. ಅಧಿಕಾರಿಗಳು ಗ್ರಾಮಸ್ಥರ ಗೋಳು ಕಂಡು ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದ್ದಾರೆ.
ಸಂಸದರ ಸೂಚನೆಗೂ ಡೋಂಟ್ ಕೇರ್ ಅಂದ ಹೆಸ್ಕಾಂ: ಕಳೆದ ಆರು ತಿಂಗಳಿನಿಂದ ವಿದ್ಯುತ್ ಇಲ್ಲದ ಕಾರಣ, ಕಮ್ಮರಗಾಂವ್ ಜನರು ಹೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಅನಿವಾರ್ಯವಾಗಿ ಈ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ದೂರು ಸಲ್ಲಿಸಲಾಗಿತ್ತು. ಸಂಸದರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನು ಸಮೀಕ್ಷೆಗೆ ಬಂದ ತಹಶೀಲ್ದಾರ್ ಎನ್.ಎಫ್. ನರೋನಾ ಹಾಗೂ ಅವರೊಂದಿಗೆ ಬಂದ ಅಧಿಕಾರಿಗಳ ಬಳಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದು, ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
“ಮಳೆಗಾಲ ಆರಂಭದಿಂದಲೂ ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡುತ್ತಿದ್ದೇವೆ. ಆದರೆ ಈವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಸಂಸದರಿಗೂ ಮನವಿ ಮಾಡಿದ್ದೇವೆ. ಇದೀಗ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದಾರೆ. ನಮಗೆ ರೇಷನ್ ಪಡೆಯಲು 125 ಕಿ.ಮೀ ಸುತ್ತುವರಿಯಬೇಕಾಗಿದೆ. ರಸ್ತೆ ಇಲ್ಲ. ವಿದ್ಯುತ್ ಇದ್ದು ಇಲ್ಲದಂತಾಗಿದೆ. ಇದೀಗ ಸಮೀಕ್ಷೆಗೆ ಗೋವಾ ರಾಜ್ಯಕ್ಕೆ ಬಂದಿದ್ದೇವೆ. ನಮ್ಮೂರಿಗೆ ಇನ್ನಾದರೂ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮದ ಅಂಕಿತಾ ವೆಳಿಪ್ ಆಗ್ರಹಿಸಿದ್ದಾರೆ.
Laxmi News 24×7