ಬೆಂಗಳೂರು: ರಾಜಧಾನಿಯಲ್ಲಿ ರಸ್ತೆಗಳ ಸ್ಥಿತಿಗತಿ ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಏಕಿ ನಗರ ಪ್ರದಕ್ಷಿಣೆ ಕೈಗೊಂಡು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ನಗರದಲ್ಲಿ ರಸ್ತೆಗುಂಡಿಗಳಿಂದ ರಸ್ತೆಗಳು ಹಾಳಾಗಿವೆ. ಘನ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಕೊರತೆ ಹಾಗೂ ಮಳೆಪೀಡಿತ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಸಮಸ್ಯೆ ಅರಿಯಲು ಸಿದ್ದರಾಮಯ್ಯ ಅವರು ಸಿಟಿ ರೌಂಡ್ಸ್ ಕೈಗೊಂಡರು. ರಸ್ತೆ ಗುಂಡಿ ಮುಚ್ಚದಿರುವುದು, ರಸ್ತೆ ಬದಿಯಲ್ಲಿ ಘನತ್ಯಾಜ್ಯ ಇರುವುದು ಹಾಗೂ ವೈಟ್ ಟಾಪಿಂಗ್ ರಸ್ತೆ ಸಮರ್ಪಕವಾಗಿ ನಿರ್ವಹಣೆ ಕಂಡು ಬರದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಗರಂ ಆದರು.
ತ್ಯಾಜ್ಯ ಕಂಡು ಕಾರು ನಿಲ್ಲಿಸಿದ ಸಿಎಂ : ಹೆಣ್ಣೂರು ಫ್ಲೈಓವರ್ ಕೆಳಗೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದಿದ್ದು, ಅದರೊಳಗೆ ತಲೆ ಎತ್ತರಕ್ಕೆ ಗಿಡಗಳು ಬೆಳೆದು ನಿಂತಿರುವುದಕ್ಕೆ ಸಿಎಂ ಗರಂ ಆದರು. ಇದು ತುಂಬಾ ಹಳೆ ತ್ಯಾಜ್ಯ..ಇಷ್ಟು ವರ್ಷ ಎಷ್ಟು ಜನ ಅಧಿಕಾರಿಗಳು ಇಲ್ಲಿ ಓಡಾಡಿರ್ತೀರಿ. ಯಾರಿಗೂ ಕಣ್ಣಿಗೆ ಬಿದ್ದಿಲ್ವಾ ಎಂದು ಸಿಎಂ ಪ್ರಶ್ನಿಸಿದರು.
24 ಗಂಟೆಗಳ ಒಳಗೆ ತ್ಯಾಜ್ಯ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದರು. ಈ ಜಾಗದಲ್ಲಿ ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಾಹನ ಸೀಜ್ ಮಾಡಿ ಕೇಸ್ ದಾಖಲಿಸುವಂತೆ ತಾಕೀತು ಮಾಡಿದರು.
ಮೆಟ್ರೋ ಕಾಮಗಾರಿ ವೇಳೆ ಸರ್ವೀಸ್ ರಸ್ತೆಗಳ ಬಿಎಂಆರ್ಸಿಎಲ್ ನಿರ್ಲಕ್ಷ್ಯ ಮಾಡಕೂಡದು. ರಸ್ತೆ ಬದಿ ನೀರು ಸರಾಗವಾಗಿ ಹರಿಯಲು ಇರುವ ವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಹಾಳಾಗಿರುವ ವೈಟ್ ಟಾಪಿಂಗ್ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು ಹಾಗೂ ಸರ್ವೀಸ್ ರಸ್ತೆಗಳ ನಿರ್ವಹಣೆ ಮಾಡುವಂತೆ ಸೂಚಿಸಿದರು.
ಬಾಗಲೂರು ರಸ್ತೆಯ ಹೆಣ್ಣೂರು ಬಳಿ ವೈಟ್ ಟಾಪಿಂಗ್ ಮಾಡಲು ಆರಿಸಿಕೊಂಡ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರ ಹೊಣೆಯನ್ನು ಗುತ್ತಿಗೆದಾರರೇ ಹೊರಬೇಕು. ಒಮ್ಮೆ ವೈಟ್ ಟಾಪಿಂಗ್ಗೆ ರಸ್ತೆ ಕಾಮಗಾರಿ ಒಪ್ಪಿಸಿದ ಮೇಲೆ ಆ ರಸ್ತೆಗಳ ನಿರ್ವಹಣೆಗೆ ಜಿಬಿಎ ಹಣ ಕೊಡಲು ಬರುವುದಿಲ್ಲ. ಕಾಮಗಾರಿ ಮುಗಿಯುವವರೆಗೂ ಗುತ್ತಿಗೆದಾರರೇ ರಸ್ತೆಗಳ ನಿರ್ವಹಿಸಬೇಕು. ಸಮರ್ಪಕ ನಿರ್ವಹಣೆ ಮಾಡದ ವೈಟ್ ಟಾಪಿಂಗ್ ಗುತ್ತಿಗೆದಾರರು ಮತ್ತು ಇಂಜಿನಿಯರ್ಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.