ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಶಾಸಕ ವಿಜಯಾನಂದ ಕಾಶಪ್ಪನವರ್
ಬಾಗಲಕೋಟೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷರಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರ್ ಭಾನುವಾರ ತಿಳಿಸಿದ್ದಾರೆ.
ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ಧರ್ಮದರ್ಶಿಗಳು, ಸಮುದಾಯದವರು ಸೇರಿ ಒಂದು ತತ್ವ ಆದರ್ಶದ ಮೇಲೆ ಈ ಪೀಠವನ್ನು ಕಟ್ಟಲಾಗಿತ್ತು. ಇವತ್ತಿನವರೆಗೂ ನಾವು ಬಸವತತ್ವದ ಮೇಲೆ ನಡೆದುಕೊಂಡು ಬಂದಿದ್ದೆವು. ಬಸವಣ್ಣನವರ ಐಕ್ಯ ಭೂಮಿಯಲ್ಲಿ ನಾವು ಮಠವನ್ನು ಮಾಡಿದ್ದೇವೆ. ಇದನ್ನು ಮಾಡುವಂತಹ ಸಮಯದಲ್ಲಿ ಇಲ್ಲಿ ಬಸವಣ್ಣನವರ ತತ್ವದಂತೆಯೇ ನಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಈ ಪೀಠದಲ್ಲಿ ಕೂರಿಸಿದ್ದೆವು. ಆದರೆ, ಅವರು ಟ್ರಸ್ಟ್ನವರ ಮಾತನ್ನು ಕೇಳದೆ, ತಪ್ಪು ಹೆಜ್ಜೆ ಇಡುತ್ತಾ ಬರುತ್ತಿದ್ದಾರೆ ಎಂದಿದ್ದಾರೆ.ಹಲವು ವರ್ಷಗಳಿಂದ ಹೀಗೆಯೇ ನಡೆದುಕೊಂಡು ಬಂದಿದ್ದಾರೆ. ಇದನ್ನು ಗಮನಿಸಿ ಅವರಿಗೆ ಹಲವು ಬಾರಿ ನೋಟಿಸ್ ಕೊಟ್ಟಿದ್ದಾರೆ. ಅವರ ಬಳಿ ಉತ್ತರವನ್ನೂ ಪಡೆದಿದ್ದಾರೆ. ನಮ್ಮ ಬಳಿ ಉತ್ತರವೂ ಇವೆ. ಅವರು ಸರಿಯಾಗಿ ನಡೆದುಕೊಂಡು ಹೋಗುತ್ತೇನೆ ಎಂದು ಉತ್ತರವನ್ನೂ ಬರೆದಿದ್ದಾರೆ. ಪದೇ ಪದೇ ನಾವು ಇದನ್ನೇ ನೋಡುವುದಾಯಿತು. ನಮ್ಮ ವಿರುದ್ದವೂ ಆರೋಪ ಮಾಡಿದ್ರು. ನಾನು ಅಧ್ಯಕ್ಷನಾದ ಮೇಲೆ ನನ್ನ ವಿರೋಧಿಗಳ ಗುಂಪನ್ನು ಎತ್ತಿಕಟ್ಟಿ ರಾಜಕಾರಣ ಮಾಡಲು ಹೋದ್ರು. ಇವತ್ತು ರಾಜಕಾರಣವನ್ನೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.