Breaking News

ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡುವಂತೆ ಒತ್ತಾಯಿಸಿ ಡಿಸಿ ಕಚೇರಿಗೆ ಮುತ್ತಿಗೆ

Spread the love

ಉಡುಪಿ: ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕಿನ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಕೆಲವು ಸಮಯದಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರೈತರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಬೈಂದೂರಿನಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ನೂರಾರು ರೈತರು ಹಸಿರು ಶಾಲು ಬೀಸುತ್ತಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಲಗಿ ಆಕ್ರೋಶ ಹೊರಹಾಕಿದರು. ಭತ್ತದ ಪೈರನ್ನು ಮಂಚಕ್ಕೆ ಹೊಡೆದು ಸಿಟ್ಟನ್ನು‌ ಹೊರಹಾಕಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, “ಹಳ್ಳಿಗಳನ್ನು, ಅರಣ್ಯ ಪ್ರದೇಶಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡುವವರೆಗೂ ನಾವು ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಬೈಂದೂರಿನಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ” ಎಂದೂ ಹೇಳಿದರು.

ರೈತರ ಆಗ್ರಹ-ವಿರೋಧಗಳೇನು?: 5 ವರ್ಷಗಳ ಹಿಂದೆ ಬೈಂದೂರು ಪುರಸಭೆಯನ್ನು ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಈವರೆಗೂ ಚುನಾವಣೆ ನಡೆದಿಲ್ಲ. ಹೀಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅಲ್ಲದೆ, ಬೈಂದೂರು ಪಟ್ಟಣ ವ್ಯಾಪ್ತಿ ಬಿಟ್ಟು ಗ್ರಾಮಾಂತರ ಪ್ರದೇಶಗಳು, ಅರಣ್ಯ ಪ್ರದೇಶಗಳನ್ನೂ ಸೇರಿಸಿಕೊಂಡಿರುವುದರಿಂದ ಗ್ರಾಮಾಂತರ ಪ್ರದೇಶದ ರೈತರು ನಾನಾ ಇಲಾಖೆಗಳಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸಂಘ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ. ಸರ್ಕಾರದ ಪ್ರಸ್ತಾವಿತ ಯೋಜನೆಯಲ್ಲಿ 20 ವಾರ್ಡ್‌ಗಳನ್ನು ರಚಿಸಲಾಗಿದ್ದು, ಅದರಲ್ಲಿ ಗ್ರಾಮಾಂತರ ಪ್ರದೇಶವನ್ನು ಸೇರಿಸಿಕೊಂಡು 9 ವಾರ್ಡ್‌ಗಳನ್ನು ರಚಿಸಲಾಗಿದೆ.

farmers protest

ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ: “ಈ ನಡುವೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಪಟ್ಟಣ ಪಂಚಾಯಿತಿಯ ಸರ್ವೆ ನಡೆಸಿ 11 ವಾರ್ಡ್‌ಗಳನ್ನು ರಚಿಸಿ, ಸರ್ಕಾರದ ಅನುಮೋದನೆಗೆ ಅರ್ಜಿ ಸಲ್ಲಿಸಿತ್ತು. ಆದರೆ ಇದಕ್ಕೆ ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಈ ಪ್ರತಿಭಟನೆ ನಡೆಸಿದ್ದೇವೆ” ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ಅರುಣ್ ಕುಮಾರ್, ವೀರಭದ್ರ ಗಾಣಿಗ, ಕೃಷ್ಣ ದೇವಾಡಿಗ, ಮ್ಯಾಥ್ಯು, ನಾಗರಾಜ್ ಮರಾಠೆ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ವಿಕಸಿತ ಭಾರತ ಪರಿಕಲ್ಪನೆಯ ಕೇಂದ್ರದ ಬಜೆಟ್:ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Spread the loveಬೆಳಗಾವಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ನಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿತ್ವ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ