ಉಡುಪಿ: ಹನಿಟ್ರ್ಯಾಪ್ ಜಾಲವೊಂದನ್ನು ಭೇದಿಸಿರುವ ಜಿಲ್ಲೆಯ ಕುಂದಾಪುರ ನಗರ ಠಾಣೆ ಪೊಲೀಸರು ಮಹಿಳೆ ಸಹಿತ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಹಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧಿಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ (36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್ (23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್ (26) ಹಾಗೂ ಕುಂದಾಪುರ ಎಂ.ಕೋಡಿಯ ಆಸ್ಮಾ (43) ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಹರಿರಾಂ ಶಂಕರ್, ದೂರುದಾರ ಸಂದೀಪ್ ಕುಮಾರ್ ಸುಮಾರು ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಆರೋಪಿ ಸವದ್‌ನ ಪರಿಚಯವಾಗಿತ್ತು. ಮುಂದೆ ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚಯ ಕೂಡ ಆಗಿತ್ತು. ಇದೇ ವೇಳೆ ಸವದ್, ಆಸ್ಮಾ ಎಂಬ ಮಹಿಳೆಯನ್ನು ಪರಿಚಯ ಮಾಡಿಕೊಟ್ಟು, ಆಕೆಯ ಮೊಬೈಲ್ ನಂಬರ್ ಕೊಟ್ಟಿದ್ದ. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದ ಎಂದು ಹೇಳಿದರು.

ಕೂಡಿಹಾಕಿ, ರಾಡ್ನಿಂದ ಹಲ್ಲೆ, ಹಣ ಸುಲಿಗೆ: ಸೆಪ್ಟೆಂಬರ್ 2ರ ಸಂಜೆ ವೇಳೆಗೆ ಮಹಿಳೆಗೆ ಸಂದೀಪ್ ಕರೆ ಮಾಡಿದ್ದು, ಆಕೆ ಅವರನ್ನು ಕುಂದಾಪುರಕ್ಕೆ ಬರಲು ತಿಳಿಸಿದ್ದಳು. ನಂತರ ಕೋಟೇಶ್ವರದ ಬಾಡಿಗೆ ಮನೆಗೆ ಇಬ್ಬರೂ ಹೋಗಿದ್ದರು. ಆ ಕೂಡಲೇ, ಉಳಿದ ಆರೋಪಿಗಳು ಆ ಮನೆಗೆ ಬಂದಿದ್ದಾರೆ. ಬಳಿಕ ಸಂದೀಪ್ನನ್ನು ಕೂಡಿಹಾಕಿ, ರಾಡ್ನಿಂದ ಹಲ್ಲೆ ಮಾಡಿ, ಅವರಿಗೆ ಹೆದರಿಸಿ ಎಟಿಎಂಗೆ ಕರೆದೊಯ್ದು 40 ಸಾವಿರ ವಿತ್ಡ್ರಾ ಮಾಡಿಸಿಕೊಂಡಿದ್ದಲ್ಲದೆ, ಅವರ ಬಳಿಯಿದ್ದ 6 ಸಾವಿರ ರೂ. ಹಣವನ್ನೂ ಕಿತ್ತುಕೊಂಡಿದ್ದಾರೆ. ಅಲ್ಲದೆ, ಬೇರೆ ಖಾತೆಗಳಿಂದ ಪೋನ್ ಪೇಯಲ್ಲಿ ಸುಮಾರು 35 ಸಾವಿರ ರೂ. ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಬೇರೆಯವರಿಗೆ ಈ ಬಗ್ಗೆ ಹೇಳಿದರೆ ಸಾಯಿಸುವುದಾಗಿ ಸಂದೀಪ್ಗೆ ಹೆದರಿಸಿ, ಮನೆಯಿಂದ ಹೊರಗಡೆ ಕಳಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.