ಬೆಂಗಳೂರು: ಪಂಚ ಗ್ಯಾರಂಟಿಗಳಿಗಾಗಿ 2023-24 ಸಾಲಿನಲ್ಲಿ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರೂಪಾಯಿ ನಿವ್ವಳ ಮಾರುಕಟ್ಟೆ ಸಾಲ ಮಾಡಿರುವುದಾಗಿ ರಾಜ್ಯ ಹಣಕಾಸು ವ್ಯವಹಾರಗಳ ಕುರಿತ ಮಹಾಲೇಖಪಾಲರ ಲೆಕ್ಕಪರಿಶೋಧನಾ ವರದಿ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ರಾಜ್ಯ ಹಣಕಾಸು ವ್ಯವಹಾರಗಳ ಕುರಿತ ಮಹಾಲೇಖಪಾಲರ ಲೆಕ್ಕಪರಿಶೋಧಕರ ವರದಿ ಮಂಡನೆ ಮಾಡಿದರು. ವರದಿಯಲ್ಲಿ 2023-24 ನೇ ಸಾಲಿನಲ್ಲಿ ಸರ್ಕಾರದ ವೆಚ್ಚ, ಹಣಕಾಸು ನಿರ್ವಹಣೆ, ಬಜೆಟ್‌ಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಲಾಗಿದೆ. ಒಟ್ಟು ರಾಜಸ್ವ ವೆಚ್ಚದಲ್ಲಿ ಶೇ.15 ರಷ್ಟು ಪಂಚ ಗ್ಯಾರಂಟಿ ಪಾಲು ಹೊಂದಿದೆ ಎಂದು ವಿವರಿಸಿದೆ.
2023-24 ಸಾಲಿನಲ್ಲಿ ಗೃಹ ಲಕ್ಷ್ಮಿಗೆ 16,964 ಕೋಟಿ ರೂ., ಗೃಹ ಜ್ಯೋತಿಗೆ 8,900 ಕೋಟಿ ರೂ., ಅನ್ನಭಾಗ್ಯಕ್ಕೆ 7,384 ಕೋಟಿ ರೂ., ಶಕ್ತಿ ಯೋಜನೆಗೆ 3,200 ಕೋಟಿ ರೂ. ಮತ್ತು ಯುವನಿಧಿಗೆ 88 ಕೋಟಿ ರೂ. ಹೊರೆಯಾಗಿತ್ತು. ಪಂಚ ಗ್ಯಾರಂಟಿಗಳಿಗಾಗಿ ಕಳೆದ ವರ್ಷದ ಸಾಲಿನಲ್ಲಿ ಸರ್ಕಾರದಿಂದ ಹೆಚ್ಚುವರಿ ಸಾಲ ಎತ್ತುವಳಿ ಮಾಡಲಾಗಿದೆ. ಪಂಚ ಗ್ಯಾರಂಟಿಗಳಿಂದ ಸರ್ಕಾರದ ವಿತ್ತೀಯ ಕೊರತೆ 46,623 ಕೋಟಿ ರೂ.ನಿಂದ 65,522 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಉಲ್ಲೇಖಿಸಿದೆ.
ಗ್ಯಾರಂಟಿ ಯೋಜನೆಗಳು ಮತ್ತು ಅದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸಲು ರಾಜ್ಯ ಸರ್ಕಾರ ₹63,000 ಕೋಟಿಗಳನ್ನು ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿತ್ತು. ಇದು 2022-23 ಸಾಲಿನ ನಿವ್ವಳ ಸಾಲಕ್ಕಿಂತ (₹26,000 ಕೋಟಿ) ₹37,000 ಕೋಟಿ ಹೆಚ್ಚಾಗಿದೆ. 2022-23 ಸಾಲಿಗೆ ಹೋಲಿಸಿದರೆ ಗ್ಯಾರಂಟಿ ಯೋಜನೆಗಳು ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ಸುಮಾರು ₹5,229 ಕೋಟಿಗಳಷ್ಟು ಕಡಿಮೆ ಮಾಡಿದೆ ಎಂದು ವಿವರಿಸಿದೆ.
ಎಂಟು ಅನುದಾನಗಳಡಿ ಹೆಚ್ಚುವರಿ ವೆಚ್ಚ: 2023-24ರಲ್ಲಿ ಎಂಟು ಅನುದಾನಗಳಡಿ ₹2,851.48 ಕೋಟಿ ಹೆಚ್ಚುವರಿ ವೆಚ್ಚವಾಗಿರುವುದನ್ನು ಗಮನಿಸಲಾಗಿದ್ದು, ಇದನ್ನು ಸಕ್ರಮಗೊಳಿಸುವ ಅಗತ್ಯವಿದೆ. ಇದಲ್ಲದೆ, 2020-21 ಮತ್ತು 2022-23ಕ್ಕೆ ಸಂಬಂಧಿಸಿದಂತೆ ₹2,323.74 ಕೋಟಿಯ ಹೆಚ್ಚುವರಿ ವೆಚ್ಚವನ್ನು ಇನ್ನೂ ಸಕ್ರಮಗೊಳಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವೈಯಕ್ತಿಕ ಠೇವಣಿ ಖಾತೆಯಲ್ಲಿ ದೊಡ್ಡ ಮೊತ್ತ ಉಳಿಕೆ: ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿಕೆ ಮೊತ್ತ 2020-21ರಿಂದ ಹೆಚ್ಚುತ್ತಿರುವ ಪ್ರವೃತ್ತಿಯಲ್ಲಿದೆ. 2022-23ರ ಅವಧಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿದೆ ಮತ್ತು 2023-24ರಲ್ಲಿ ಇದು ಶೇಕಡಾ 11.27ರಷ್ಟು ಹೆಚ್ಚಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ರಸೀದಿಗಳನ್ನು ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಇರಿಸಲಾಗಿರುವುದರಿಂದ ಇದು ಸಂಭವಿಸಿದೆ. ಅಂತಹ ದೊಡ್ಡ ಮೊತ್ತದ ಹಣವನ್ನು ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿಸಿಕೊಳ್ಳುವುದು ಶಾಸಕಾಂಗ ಹಣಕಾಸು ನಿಯಂತ್ರಣದ ತತ್ವಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದೆ.
ಶೇ.23.49ಕ್ಕೆ ಸಾಲದ ಹೊಣೆಗಾರಿಕೆ ಏರಿಕೆ: ಕರ್ನಾಟಕ ಸರ್ಕಾರದ ಹೊಣೆಗಾರಿಕೆಗಳು 2019-20ರಿಂದ 2023-24ರ ನಡುವೆ ವಾರ್ಷಿಕವಾಗಿ ಸರಾಸರಿ 17.35 ಶೇಕಡಾ ದರದಲ್ಲಿ ಬೆಳೆದಿದೆ. 2020-21ರ ವರೆಗೆ ಏರಿಕೆಯ ಪ್ರವೃತ್ತಿಯಲ್ಲಿದ್ದ ಕರ್ನಾಟಕದ ಹೊಣೆಗಾರಿಕೆಗಳು / ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು (ಜಿಎಸ್ ಟಿ) 2022-23ರಿಂದ ಇಳಿಕೆಯ ಪ್ರವೃತ್ತಿಯನ್ನು ಕಂಡಿತು. 2022-23ರಲ್ಲಿ ಶೇಕಡಾ 23.03ಕ್ಕೆ ಇಳಿಯಿತು. 2023-24ರ ಅವಧಿಯಲ್ಲಿ ರಾಜ್ಯವು ಹೆಚ್ಚು ಸಾಲ ಪಡೆದ ಕಾರಣದಿಂದಾಗಿ ಇದು ಮತ್ತೊಮ್ಮೆ ಶೇ.23.49ಕ್ಕೆ ಏರಿತು ಎಂದು ಸಿಎಜಿ ವರದಿ ಹೇಳಿದೆ.