ಜಮ್ಮು: ಭಾರಿ ಮಳೆಯಿಂದ ಸಂಚಾರಕ್ಕೆ ಅಡಚಣೆಯಾಗಿದ್ದು, ತುರ್ತು ದುರಸ್ತಿ ಮತ್ತು ನಿರ್ವಹಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಆಗಸ್ಟ್ 3ರವರೆಗೆ ಪವಿತ್ರ ಅಮರನಾಥ ಯಾತ್ರೆಯನ್ನು ಎರಡೂ ಮಾರ್ಗದಲ್ಲೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಪಹಲ್ಗಾಮ್ ಮಾರ್ಗದಿಂದ ಯಾವುದೇ ಹೊಸ ಯಾತ್ರಿಕರ ತಂಡ ಪ್ರಯಾಣ ಕೈಗೊಂಡಿಲ್ಲ. ಆದರೆ, ಬಾಲ್ಟಾಲ್ ಮಾರ್ಗವಾಗಿ ಗುಹಾಂತರ ದೇಗುಲಕ್ಕೆ ಯಾತ್ರಿಕರು ತೆರಳಿದ್ದಾರೆ. ಬಳಿಕ ಭಾರಿ ಮಳೆಯಿಂದಾಗಿ ಬಲ್ಟಾಲಾ ಮಾರ್ಗದಲ್ಲೂ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಳೆದೆರಡು ದಿನದಿಂದ ಧಾರಾಕಾರ ಮಳೆಯಿಂದಾಗಿ ಭಗವತಿ ನಗರ್ ಬೇಸ್ ಕ್ಯಾಂಪ್ನಲ್ಲಿ ಯಾತ್ರೆಯನ್ನು ಮೊಟಕುಗೊಳಿಸಲಾಗಿದೆ. ಇದೀಗ ಮತ್ತೆರಡು ದಿನಗಳ ಕಾಲ ಯಾತ್ರೆ ನಿಲ್ಲಿಸಲಾಗಿದ್ದು, ಈ ಕುರಿತು ಮಾಹಿತಿ ನೀಡಿದ ಕಾಶ್ಮೀರ ವಲಯದ ಆಯುಕ್ತ ವಿಜಯ್ ಕುಮಾರ್ ಬಿಧುರಿ ಅವರು, ಮಳೆಯಿಂದಾಗಿ ಅಮರನಾಥ ಯಾತ್ರೆ ಸಾಗುವ ಬಾಲ್ಟಾಲ್ ಮಾರ್ಗದಲ್ಲಿ ದುರಸ್ತಿ ಮತ್ತು ನಿರ್ವಹಣೆ ಕೆಲಸ ನಡೆಯಬೇಕಿದೆ. ಯಾತ್ರಿಕರ ಭದ್ರತಾ ಹಿತಾಸಕ್ತಿಗಾಗಿ ಬಾಲ್ಟಾಲ್ ಮಾರ್ಗದಲ್ಲಿ ಆಗಸ್ಟ್ 3ರವರೆಗೆ ಯಾವುದೇ ಯಾತ್ರೆ ಸಾಗುವುದಿಲ್ಲ. ಈ ಕುರಿತು ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದರು.
ಮಳೆಯಿಂದಾಗಿ ರಸ್ತೆಗಳು ಅಸುರಕ್ಷಿತವಾಗಿದ್ದು, ಬುಧವಾರವೂ ಕೂಡ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ಪಹಲ್ಗಾಮ್ ಮಾರ್ಗದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯ ಸಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದಕ್ಕೆ ಮುನ್ನ, ಜುಲೈ 17ರಂದು ಕೂಡ ಮಳೆಯಿಂದಾಗಿ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
Laxmi News 24×7