ಚಾಮರಾಜನಗರ: ಬಹುನಿರೀಕ್ಷಿತ ಚಿತ್ರ ‘ಕೊತ್ತಲವಾಡಿ’ ಬಿಡುಗಡೆಗೆ ಇನ್ನೊಂದು ದಿನವಷ್ಟೇ ಬಾಕಿ. ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಣದ ಚೊಚ್ಚಲ ಚಿತ್ರ ಇದೇ ಶುಕ್ರವಾರ ಅದ್ಧೂರಿಯಾಗಿ ತೆರೆಗಪ್ಪಳಿಸಲಿದ್ದು, ಚಿತ್ರತಂಡ ಇಂದು ಗುಂಡ್ಲುಪೇಟೆ ತಾಲೂಕಿನ ಕೊತ್ತಲವಾಡಿ ಗ್ರಾಮಕ್ಕೆ ಭೇಟಿ ಕೊಟ್ಟಿದೆ.
ಬಹುನಿರೀಕ್ಷಿತ ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್, ನಾಯಕ ನಟ ಪೃಥ್ವಿ ಅಂಬಾರ್ ಹಾಗೂ ನಾಯಕ ನಟಿ ಕಾವ್ಯ ಶೈವ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ದೇವತೆಯಾದ ಶ್ರೀ ಪಾರ್ವತಾಂಭೆಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ, ತಮ್ಮ ಚಿತ್ರದ ನಾಯಕ ನಾಯಕಿಗೆ ಕುಂಕುಮವಿಟ್ಟು ಸಿನಿಮಾ ಯಶಸ್ಸು ಕಾಣಲೆಂದು ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಹಾರೈಸಿದರು.
ಗ್ರಾಮಕ್ಕೆ ಆಗಮಿಸಿದ ಚಿತ್ರತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮಸ್ಥರು ಫಲ-ತಾಂಬೂಲ ಕೊಟ್ಟು, ಶಾಲು ಹೊದಿಸಿ ಸನ್ಮಾನಿಸಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.
ಕೊತ್ತಲವಾಡಿ ಗ್ರಾಮಸ್ಥರು ಒಳ್ಳೇ ಜನ… ಪುಷ್ಪ ಅರುಣ್ ಕುಮಾರ್ ಮಾತನಾಡಿ, ಕೊತ್ತಲವಾಡಿ ಊರಿಗೆ ಯಶ್ ಕುಟುಂಬದಿಂದ ಅಪೂರ್ವ ವಂದನೆಗಳನ್ನು ಸಲ್ಲಿಸುತ್ತೇನೆ. ಇಡೀ ಚಿತ್ರಕ್ಕೆ ಕೊತ್ತಲವಾಡಿ ಗ್ರಾಮಸ್ಥರು ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಅಣ್ಣಾವ್ರು ಹೇಳಿದಂತೆ ಹಳ್ಳಿ ಜನ ಒಳ್ಳೇಜನ, ಕೊತ್ತಲವಾಡಿ ಗ್ರಾಮಸ್ಥರು ಒಳ್ಳೇ ಜನ ಎಂದು ಬಣ್ಣಿಸಿದರು.’ಯಶ್ ಕುಟುಂಬಕ್ಕೂ ಕೊತ್ತಲವಾಡಿಗೂ ಯಾವುದೋ ಋಣಾನುಬಂಧ ಇರಬೇಕು’: ಜನರ ಪ್ರೀತಿ ಕಂಡು ಬಹಳ ಖುಷಿಯಾಗ್ತಿದೆ. ನಾನೂ ಹಳ್ಳಿಯಿಂದಲೇ ಬಂದವಳು. ಹಾಗಾಗಿ, ನನಗೆ ಹಳ್ಳಿಯೆಂದರೆ ಬಹಳ ಇಷ್ಟ. ಯಶ್ ಕುಟುಂಬಕ್ಕೂ ಕೊತ್ತಲವಾಡಿಗೂ ಯಾವುದೋ ಋಣಾನುಬಂಧ ಇರಬೇಕು. ಹಾಗಾಗಿ, ಈ ಸಿನಿಮಾ ಮೂಡಿಬಂದಿದೆ. ಶೀರ್ಷಿಕೆಯನ್ನು ಆಕಸ್ಮಿಕವಾಗಿ ಇಟ್ಟದ್ದು. ಕರ್ನಾಟಕದ ಮೂಲೆ ಮೂಲೆಯ ಹಳ್ಳಿಯಿಂದಲೂ ಬಂದು ಸಿನಿಮಾ ವೀಕ್ಷಿಸಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದರು.