ಮಡಿಕೇರಿ: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಷಯ ಮುನ್ನೆಲೆಗೆ ಬಂದಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಮಡಿಕೇರಿಯಲ್ಲಿ ಮದ್ಯ ಪ್ರಿಯರು ಇಷ್ಟದ ಬ್ರಾಂಡ್‍ಗಳನ್ನು ಖರೀದಿಸುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಒಂದು ವೇಳೆ ಇಡೀ ರಾಜ್ಯ ಅಥವಾ ಆಯ್ದ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸಿದರೆ ಎಂಬ ಮುಂದಾಲೋಚನೆಯಿಂದ ಮದ್ಯ ಪ್ರಿಯರು ತಮ್ಮಿಷ್ಟದ ಮದ್ಯದ ಬ್ರ್ಯಾಂಡ್‍ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.
ಹಲವರು ಒಂದು ವಾರಕ್ಕೆ ಸಾಕಾಗುವಷ್ಟು ಮದ್ಯ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ. ವಾರದಿಂದ ಅಷ್ಟೇನು ವ್ಯಾಪಾರ ಇಲ್ಲದ ಬಾರ್‍ಗಳಲ್ಲಿ ಇಂದು ದಿಡೀರ್ ಅಗಿ ಜನ ಮದ್ಯದ ಅಂಗಡಿಗಳಿಗೆ ಹೆಚ್ಚಾಗಿ ಬರುತ್ತಿದ್ದಾರೆ. ಹೀಗಾಗಿ ಬಾರ್‍ಗಳಲ್ಲಿನ ಸ್ಟಾಕ್ ಕ್ಲೀಯರ್ ಆಗುತ್ತಿದೆ. ಈ ಬಗ್ಗೆ ಬಾರ್ ಸಿಬ್ಬಂದಿಯೊಬ್ಬರು ಮಾತಾನಾಡಿ, ಬೆಂಗಳೂರಿನಲ್ಲಿ ಸಿಎಂ ತೆಗೆದುಕೊಂಡ ನಿರ್ಧಾರದ ಬಳಿಕ ವ್ಯಾಪಾರ ಬಿರುಸಾಗಿದೆ. ಒಂದು ಲಕ್ಷ ವ್ಯಾಪಾರಕ್ಕೆ ಸಂಜೆವರಗೆ ಕಾಯುತ್ತಿದ್ದೆವು. ಆದರೆ ಇವತ್ತು ಮಧ್ಯಾಹ್ನದ ವೇಳೆಗಾಗಲೇ ಲಕ್ಷ ವ್ಯಾಪಾರವಾಗಿದೆ ಎಂದಿದ್ದಾರೆ.
ರಾಜ್ಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್ ಮಾಡಿ ಸರ್ಕಾರ ಆದೇಶಿಸಿದೆ. ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸುವಂತೆ ಜನತೆ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳೂ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.
ಲಾಕ್‍ಡೌನ್ ಅಗತ್ಯವಿದೆಯೋ ಅಥವಾ ಬೇಡವೋ ಎನ್ನುವ ಬಗ್ಗೆ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಕೊಡಗಿನಲ್ಲೂ ಕೊರೊನಾ ಪ್ರಕರಣಗಳು ಹರಡುತ್ತಿವೆ. ಬಹುಶಃ ಲಾಕ್‍ಡೌನ್ ಮಾಡಬಹುದುದೇನೋ ಎಂದು ಮದ್ಯ ಪ್ರಿಯರು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಬಾರ್ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.