ಹೈದರಾಬಾದ್: ಮೂವರು ಯುವಕರಿಗೆ ವಿಡಿಯೋ ಸಂದೇಶ ಕಳುಹಿಸಿ ಮಾತನಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನ ಭಕ್ತವತ್ಸಲ ನಗರದಲ್ಲಿ ನಡೆದಿದೆ.
ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ 21 ವರ್ಷದ ಯುವತಿ, ಈ ವಿಡಿಯೋದಲ್ಲಿ ಕುತ್ತಿಗೆಗೆ ದುಪ್ಪಟ್ಟವನ್ನು ಸುತ್ತಿಕೊಂಡು ‘ಶಿವ ನನ್ನ ಜೊತೆ ಮಾತನಾಡು’ ಎಂದು ಮನವಿ ಮಾಡಿಕೊಂಡಿದ್ದಾಳೆ. ನಂತರ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಯವರು ಆಕೆಯ ರೂಮಿಗೆ ಹೋಗಿ ನೋಡಿದಾಗ ಈ ಪ್ರರಕರಣ ಬೆಳಕಿಗೆ ಬಂದಿದೆ. ಮಗಳ ಮೃತದೇಹ ನೋಡಿ ಗಾಬರಿಯಾದ ಮನೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಾಥಮಿಕ ತನಿಖೆ ಮಾಡಿ, ಯುವತಿ ವಿಡಿಯೋ ಮಾಡಿ ಮೂರು ಜನ ಯುವಕರಿಗೆ ಕಳುಹಿಸಿದ್ದಾಳೆ. ಜೊತೆಗೆ ತನ್ನ ಜೊತೆ ಮಾತನಾಡುವಂತೆ ಮನವಿ ಮಾಡಿದ್ದಾಳೆ. ಆದರೆ ಅವರು ರೀಪ್ಲೈ ಮಾಡಿಲ್ಲ. ಹೀಗಾಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಯುವತಿ ಸಾಯುವ ಮುನ್ನ ಕಳುಹಿಸಿರುವ ಸಂದೇಶದ ಪ್ರಕಾರ, ಶಿವ ಅಲಿಯಾಸ್ ಭಾರ್ಗವ್ ತನ್ನ ಜೊತೆ ಮಾತನಾಡಬೇಕು ಎಂದು ಆಕೆ ಬಯಸಿದ್ದಳು. ಆದರೆ ಯಾರೂ ಅವಳ ಜೊತೆ ಮಾತನಾಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಶಿವ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ಯುವತಿಯ ಕುಟುಂಬಸ್ಥರು ತನಿಖೆ ವೇಳೆ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಭಕ್ತವತ್ಸಲ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಯುವತಿ ಸಂದೇಶದ ಕಳುಹಿಸಿದ ಮೂವರು ಯುವಕರು ಪರಾರಿಯಾಗಿದ್ದು, ಯುವತಿಗೆ ಈ ಮೂವರ ಜೊತೆ ಇದ್ದ ಅಕ್ರಮ ಸಂಬಂಧವೇ ಆತ್ಮಹತ್ಯೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.