ಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಅಮಿತ್ ಶಾ ಅವರ ಕರ್ನಾಟಕ ಪ್ರವಾಸ ಒಂದು ದಿನ ಮೊಟಕುಗೊಂಡಿದ್ದು, ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಿ ಅಂದೇ ಕೊಚ್ಚಿಗೆ ತೆರಳಲಿದ್ದಾರೆ. ಪೂರ್ವ ನಿಯೋಜಿತ ಕಾರ್ಯಕ್ರಮಗಳ ಸರಣಿ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆಯುವ ಹಿಂದುಳಿದ ವರ್ಗದ ಸಮಾವೇಶದಲ್ಲಿ ಅವರು ಭಾಗಿಯಾಗುತ್ತಿಲ್ಲ. ಜತೆಗೆ ಬೆಂಗಳೂರಿನ ಇನ್ನೂ ಮೂರು ಕಡೆ ಆಯೋಜಿಸಿದ್ದ ಕಾರ್ಯಕ್ರಮಗಳೂ ರದ್ದುಗೊಂಡಿವೆ.
ಮಂಗಳವಾರ ಸಂಜೆ 7 ಗಂಟೆಗೆ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, 7.30ರಿಂದ 8.30ರ ವರೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ರೋಡ್ ಶೋ ನಡೆಸಲಿದ್ದಾರೆ.

ಬೊಮ್ಮನಹಳ್ಳಿ ವೃತ್ತದಿಂದ ಬನ್ನೇರುಘಟ್ಟ ರಸ್ತೆ ಐಐಎಂಬಿಯವರೆಗೆ ರೋಡ್ ಶೋ ನಡೆಸಿ ತೇಜಸ್ವಿ ಸೂರ್ಯ ಪರ ಮತಯಾಚಿಸಲಿದ್ದಾರೆ. ಬಳಿಕ ಬಿಜೆಪಿಯ ಪ್ರಮುಖರ ಜತೆಗೆ ಚುನಾವಣೆಗೆ ಸಂಬಂಧಪಟ್ಟಂತೆ ಆಂತರಿಕ ಸಭೆ ನಡೆಸಿ ರಾತ್ರಿ 10 ಗಂಟೆಗೆ ಎಚ್‌ಎಎಲ್ ಏರ್‌ಪೋರ್ಟ್ ಮೂಲಕ ಕೊಚ್ಚಿಗೆ ಪ್ರಯಾಣಿಸಲಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಪ್ರಚಾರ
ಎ.24ರಂದು ಬೆಳಗ್ಗೆ 11 ಗಂಟೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ| ಸಿ.ಎನ್.ಮಂಜುನಾಥ್ ಪರ ಅವರು ಮತಯಾಚಿಸಲಿದ್ದು, ಮೊದಲ ಹಂತದ ಚುನಾವಣೆಗೆ ಸಂಬಂಧಪಟ್ಟಂತೆ ನಡೆಯುವ ಹೈ ಫೊಫೈಲ್ ರೋಡ್ ಶೋ ಎಂದು ಹೇಳಲಾಗುತ್ತಿದೆ. ನಾಥ ಪರಂಪರೆಗೆ ಸೇರಿದ ಯೋಗಿ ಆದಿತ್ಯನಾಥ ಹಾಗೂ ಒಕ್ಕಲಿಗ ಸಮುದಾಯಕ್ಕೆ ಭಾವನಾತ್ಮಕ ನಂಟಿದೆ. ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿರುವ ಭಾಗದಲ್ಲಿ ಯೋಗಿ ಪ್ರಚಾರ ನಡೆಸಲಿದ್ದಾರೆ.
Laxmi News 24×7