ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳನ್ನ ಸೆಳೆದು ಆಪರೇಷನ್ ಕಮಲದ ಮೂಲಕ ಗುರುತಿಸಿಕೊಳ್ಳುವ ಬಿಜೆಪಿ ಪಕ್ಷ ಈಗ ಸ್ಥಳೀಯ ಸಂಸ್ಥೆಗಳಾದ ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ಆಪರೇಷನ್ ಕಮಲ ನಡೆಸಿ ಅಧಿಕಾರ ಪಡೆಯಲು ಶಾಸಕ ಉಮೇಶ್ ಕತ್ತಿ, ಸಹೋದರ ರಮೇಶ್ ಕತ್ತಿ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ
ಬಿಜೆಪಿ ಪಕ್ಷ ಕೇವಲ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಪರೇಷನ್ ಕಮಲ ಮಾಡುತ್ತಿಲ್ಲ. ಈ ಸ್ಥಳೀಯ ಸಂಸ್ಥೆಗಳಲ್ಲೂ ಆಪರೇಷನ್ ಕಮಲ ನಡೆಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದೆ. ಇಂದು ಮತ್ತು ನಾಳೆ ಜರಗುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಸಂಕೇಶ್ವರ ಪುರಸಭೆಗಳನ್ನ ಬಿಜೆಪಿ ಪಕ್ಷ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸಕಲ ಸನ್ನದ್ದವಾಗಿದೆ. ಅದರಲ್ಲೂ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಈ ಬಾರಿ ಎರಡೂ ಪುರಸಭೆಗಳಲ್ಲಿ ಬಿಜೆಪಿ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಹುಕ್ಕೇರಿ ಪುರಸಭೆಯ 23 ವಾರ್ಡಗಳಲ್ಲಿ ಬಿಜೆಪಿ ಪಕ್ಷ ಗೆದ್ದಿದ್ದು ಕೇವಲ 8 ವಾರ್ಡ್‍ಗಳಲ್ಲಿ. 12 ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೆ 3 ಪಕ್ಷೇತರ ಅಭ್ಯರ್ಥಿಗಳು ಪುರಸಭೆಗೆ ಆಯ್ಕೆಯಾಗಿದ್ದಾರೆ. ಕೇವಲ 8 ಜನರ ಸಂಖ್ಯಾಬಲ ಬಿಜೆಪಿಯಲ್ಲಿದ್ದರೂ ಈಗ ಹುಕ್ಕೇರಿ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನಲಾಗುತ್ತಿದೆ. 3 ಜನ ಪಕ್ಷೇತರ ಅಭ್ಯರ್ಥಿಗಳನ್ನ ಸೆಳೆದು ಹಾಗೂ ಬಿಜೆಪಿ ಶಾಸಕ ಉಮೇಶ್ ಕತ್ತಿ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ ಹಾಕಿದರೆ 13 ಮತಗಳು ಬಿಜೆಪಿ ಪರ ಬೀಳಲಿದ್ದು ಸುಲಭವಾಗಿ ಹುಕ್ಕೇರಿ ಪುರಸಭೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿಯಬಹದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ಪಕ್ಷ ಇದೆ.
ಸಂಕೇಶ್ವರ ಪುರಸಭೆಗೆ 23 ಅಭ್ಯರ್ಥಿಗಳ ಪೈಕಿ 11 ಜನ ಕಾಂಗ್ರೆಸ್ ಪಕ್ಷದಿಂದ ಹಾಗೂ 11 ಜನ ಬಿಜೆಪಿ ಪಕ್ಷದಿಂದ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಈಗಾಗಲೇ ಕತ್ತಿ ಸಹೋದರರು ಪಕ್ಷೇತರ ಅಭ್ಯರ್ಥಿಯನ್ನ ಸೆಳೆಯುವದರ ಜೊತೆಗೆ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳನ್ನ ಬಿಜೆಪಿ ಪಾಳಯಕ್ಕೆ ಕರೆ ತಂದಿದ್ದಾರೆ. ಹೀಗಾಗಿ ಸಂಕೇಶ್ವರ ಪುರಸಭೆಯಲ್ಲಿ ಬಿಜೆಪಿ ಪರ ಆಗುವುದರಲ್ಲಿ ಸಂಶಯವೇ ಇಲ್ಲ.
ಒಟ್ಟಿನಲ್ಲಿ ಆಪರೇಷನ್ ಕಮಲದ ಮೂಲಕ ಚರ್ಚೆಯಲ್ಲಿರುವ ಬಿಜೆಪಿ ಪಕ್ಷ ಈಗ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೂ ಆಪರೇಷನ್ ಕಮಲದ ಅಸ್ತ್ರವನ್ನ ಬಳಿಸಿ ಯಶಸ್ವಿಯಾಗುತ್ತಾ ಅನ್ನೋದನ್ನ ಕಾಯ್ದು ನೋಡಬೇಕಿದೆ.