ಹುಬ್ಬಳ್ಳಿ: ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆ ಸಾಕಷ್ಟು ಅನಾಹುತಗಳನ್ನು ಮಾಡಿದೆ. ಮಳೆರಾಯನ ಆರ್ಭಟಕ್ಕೆ ಸಾವಿರಾರು ಮನೆಗಳು ನೆಲಸಮವಾಗಿದ್ರೆ ರೈತರ ಬೆಳೆಗಳು ಮಣ್ಣುಪಾಲಾಗಿವೆ. ಆದರೆ ವಾಣಿಜ್ಯ ನಗರಿಯಲ್ಲಿ ಕೆಲವೇ ದಿನ ಸುರಿದ ಮಳೆಗೆ ರಸ್ತೆಗಳೆಲ್ಲಾ ಯಮಪುರಿಯ ದಾರಿಗಳಾಗಿವೆ.
ಮೊದಲೇ ಹುಬ್ಬಳ್ಳಿ ಧಾರವಾಡದಲ್ಲಿ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿ ಹೋಗಿವೆ. ಇದೀಗ ಕಳೆದೊಂದು ವಾರದಿಂದ ಸುರಿದ ಮಹಾಮಳೆಗೆ ಮಹಾನಗರದಲ್ಲಿನ ರಸ್ತೆಗಳು ಅಕ್ಷರಶಃ ಆಳವಾದ ಗುಂಡಿ ಬಿದ್ದು ಗಬ್ಬೆದ್ದಿವೆ. ರಸ್ತೆಯಲ್ಲಿ ಹೊಂಡವೋ, ಹೊಂಡದಲ್ಲಿ ರಸ್ತೆಯೋ ಎನ್ನುವಂತಾಗಿ ಬಿಟ್ಟಿದೆ. ಮಳೆರಾಯನ ಆರ್ಭಟದಿಂದ ಹೊಂಡದಂತಾಗಿರುವ ರಸ್ತೆಗಳಲ್ಲಿ ವಾಹನ ಸವಾರರು ಅಂಗೈಯಲ್ಲೇ ಜೀವ ಹಿಡಿದು ಪ್ರಯಾಣ ಮಾಡುವಂತಾಗಿದೆ.
ಇಲ್ಲಿನ ಸಿದ್ಧಾರೂಡ ಮಠದ ಬಳಿಯಿರುವ ಹೆಗ್ಗೆರಿ-ಆನಂದನಗರದ ಮುಖ್ಯರಸ್ತೆಯೇ ಮಳೆಗೆ ಕೊಚ್ಚಿ ಹೋಗಿದೆ. ಅಲ್ಲದೇ ಪ್ರತಿ ಬಾರಿಯೂ ಮಳೆ ಬಂದಾಗ ಈ ರಸ್ತೆಯ ಸಂಪೂರ್ಣವಾಗಿ ಹದಗೆಟ್ಟು ಹೋಗುತ್ತಿದೆ. ಈ ಕುರಿತು ಸ್ಥಳೀಯರು ಹಲವು ಬಾರಿ ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ.
ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಬಹುತೇಕ ರಸ್ತೆಗಳೆಲ್ಲಾ ಕೆರೆಗಳಂತಾಗಿವೆ. ಇನ್ನಾದ್ರೂ ಅಭಿವೃದ್ಧಿ ಹೆಸರಲ್ಲಿ ಮತ ಕೇಳೋ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ. ಇಲ್ಲದಿದ್ದರೆ ದೊಡ್ಡ ಅನಾಹುತಕ್ಕೆ ಹುಬ್ಬಳ್ಳಿ ಜನ ಸಾಕ್ಷಿಯಾದ್ರೂ ಅಚ್ಚರಿಯಿಲ್ಲ.