ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಕಚೇರಿಯ ಪೀಠೋಪಕರಣಗಳಿಗೆ ಹಾನಿ ಮಾಡಲಾಗಿದೆ.
ದೇಗುಲದ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವಿನ ಶೀತಲ ಸಮರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಪ್ರಧಾನ ಅರ್ಚಕ ಶೇಷಗಿರಿ ಭಟ್ ದೇವಸ್ಥಾನದ ಗರ್ಭಗುಡಿಯ ಮುಂದೆ ಇಂದು ಕುಟುಂಬ ಸದಸ್ಯರೊಂದಿಗೆ ಮೌನಾಚರಣೆ ಆರಂಭಿಸಿದ್ದರು. ನವರಾತ್ರಿಗೂ ಮೊದಲು ಚಂಡಿಕಾ ಹೋಮ ನಡೆಸಬೇಕು. ಟ್ರಸ್ಟಿ ರಾಮಪ್ಪ ಅವರು ಅದಕ್ಕೆ ಅವಕಾಶ ನೀಡಿಲ್ಲ ಎಂದು ಅರ್ಚಕ ಶೇಷಗಿರಿ ಭಟ್ ಆರೋಪಿಸಿದ್ದರು. ಇದೇ ಕಾರಣಕ್ಕೆ ಚೌಡೇಶ್ವರಿ ತಾಯಿಗೆ ಕೋರಿಕೆ ಮಾಡಿಕೊಂಡು ಮೌನ ವ್ರತ ಮಾಡುತ್ತಿರುವುದಾಗಿ ವಿಡಿಯೋ ಬಿಡುಗಡೆ ಮಾಡಿ ತಿಳಿಸಿದ್ದರು.
ಇಂದು ಶೇಷಗಿರಿ ಭಟ್ ಅವರು ತಮ್ಮ ಕುಟುಂಬ ಸಹಿತ ದೇವಸ್ಥಾನದ ಗರ್ಭಗುಡಿಯೊಳಗೆ ಮೌನವ್ರತ ಆರಂಭಿಸಿದ್ದರು. ಈ ವೇಳೆ ದೇವಸ್ಥಾನಕ್ಕೆ ಬಂದ ಕೆಲವು ಭಕ್ತರು, ಅರ್ಚಕರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೌನವ್ರತ ಬಿಟ್ಟು ಹೊರ ಬರುವಂತೆ ಒತ್ತಾಯಿಸಿದರು. ಈ ವೇಳೆ ಅರ್ಚಕರ ಕಡೆಯವರು ಮತ್ತು ಭಕ್ತರ ನಡುವೆ ನೂಕಾಟ, ತಳ್ಳಾಟವಾಗಿದೆ.
ಗಲಾಟೆ ವೇಳೆ ಸಿಗಂದೂರು ದೇವಸ್ಥಾನದ ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಅರ್ಚಕರ ಗುಂಪು ಹಾನಿಗೊಳಿಸಿದ್ದು, ಕೆಲವು ವಸ್ತುಗಳು ಮುರಿದು ಬಿದ್ದಿವೆ. ಗಲಾಟೆಯಿಂದಾಗಿ ದೇವಸ್ಥಾನದ ಆವರಣದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಇನ್ನು ಗಲಾಟೆಯಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದರೆ ಶಕ್ತಿ ಕೇಂದ್ರ ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿನ ಈ ಬೆಳವಣಿಗೆಗಳು ಭಕ್ತರಲ್ಲಿ ನೋವುಂಟು ಮಾಡಿದೆ.