ಬೆಳಗಾವಿ: ಹತ್ರಸ್ ದಲಿತ ಬಾಲಕಿ ಮೇಲೆ ನಡೆದ ಅತ್ಯಾಚಾರ-ಕೊಲೆ ಪ್ರಕರಣ ಖಂಡಿಸಿ ನಗರದಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸೇನೆ ಸೇರಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪದಾಧಿಕಾರಿಗಳು ಚನ್ನಮ್ಮ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ತಹ್ರಸ್ ಜಿಲ್ಲೆಯ ದಲಿತ ಬಾಲಕಿ ಮನಿಷಾ ವಾಲ್ಮೀಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಅಧಿಕಾರಿಗಳ ಮೇಲು ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತಲಿವೆ. ದೇಶದಲ್ಲಿಯೇ ಅಪರಾಧ ಪ್ರಕರಣಗಳಲ್ಲಿ ಯುಪಿ ಮೊದಲ ಸ್ಥಾನದಲ್ಲಿದೆ. ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಬಿಜೆಪಿ ಸರ್ಕಾರ ವಿಫಲವಾಗಿದ್ದು, ಕೂಡಲೇ ರಾಜಿನಾಮೆ ನೀಡುವಂತೆ ಆಗ್ರಹಿಸಿದರು.
ಮಾನವ ಬಂಧುತ್ವ ವೇದಿಕೆ ರೇಣುಕಾ ದೀಕ್ಷಿತ, ಪರಶುರಾಮ್ ಮಂದಿಹಳ್ಳಿ, ಸುನೀಲ್ ಜಾಧವ, ದಲಿತ ಸೇನೆಯ ನೂರಾರು ಕಾರ್ಯಕರ್ತರು ಇದ್ದರು.
Laxmi News 24×7