ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರ್ಕಾರದಿಂದ ಎರಡು ಎಕರೆ ಜಾಗ ಕೊಡುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕಳೆದ ಬಾರಿ ಇದೇ ವೇದಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ ಎಂದು ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗೋವಾದ ಬಿಚೋಲಿಯ ಹೀರಾಬಾಯಿ ಸಭಾಗೃಹದಲ್ಲಿ ಕರ್ಮಭೂಮಿ ಕನ್ನಡ ಸಂಘ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಕನ್ನಡಿಗರ 14 ನೇಯ ಸಾಂಸ್ಕೃತಿಕ ಸಮ್ಮೇಳನದದಲ್ಲಿ ಭಾಗಿಯಾಗಿ ಮಾತನಾಡಿದರು. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ 10 ಕೋಟಿ ರೂ ನೀಡಲು ಸಿದ್ಧವಿದೆ. ಇದರಿಂದಾಗಿ ಗೋವಾ ಸರ್ಕಾರವು ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಕಲ್ಪಿಸಿಕೊಡಬೇಕು ಎಂದು ಗೋವಾ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.