ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ಮಧ್ಯೆ ಹಲವೆಡೆ ಧಾರಾಕಾರ ಮಳೆ ಆಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕೊಡಗು ಜಿಲ್ಲೆಯ ಭಾಗಮಂಡಲ-ತಲಕಾವೇರಿ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ನಾಪೋಕ್ಲು ಭಾಗಮಂಡಲ ರಸ್ತೆ ಸಂಪರ್ಕ ಬಂದ್ ಆಗಿದೆ. ಚೇರಂಗಾಲದ ಬಳಿ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಬಂದ್ ಆಗಿದೆ. ಮಡಿಕೇರಿಯ ರಾಜಾಸೀಟ್ ರಸ್ತೆಯಲ್ಲಿ ತಡೆಗೋಡೆಯೊಂದು ಕುಸಿದು ಬಿದ್ದಿದೆ.
ಮುಂದಿನ 2 ದಿನಗಳ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನಲ್ಲಿರೋ ಹೆಬ್ಬಾಳೆ ಸೇತುವೆ ಈ ಬಾರಿಯೂ ಮುಳುಗಡೆಯಾಗೋ ಸಾಧ್ಯತೆ ಹೆಚ್ಚಿದೆ. ಈಗಾಗ್ಲೇ ಧಾರಾಕಾರ ಮಳೆಯಾಗಿರೋದ್ರಿಂದ ಸೇತುವೆ ಮುಳುಗಡೆಗೆ ಮೂರು ಅಡಿ ಮಾತ್ರ ಬಾಕಿಯಿದೆ.
ಶಿವಮೊಗ್ಗದ ಸಾಗರ, ತೀರ್ಥಹಳ್ಳಿಯಲ್ಲೂ ಧಾರಾಕಾರ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ವಿವಿಧೆಡೆ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ನಗು ತರಿಸಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೋಳಿಕಟ್ಟೆಯಲ್ಲಿ ಭಾರೀ ಮಳೆಗೆ ಕಾಂಪೌಂಡ್ ಕುಸಿದು ಮಹಿಳೆ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಮಳೆಯ ಅವಾಂತರ ಇಷ್ಟಾದರೆ ಇನ್ನು ಉತ್ತರ ಭಾರತದಲ್ಲೂ ವ್ಯಾಪಕ ಮಳೆ ಆಗ್ತಿದೆ. ಭಾರೀ ಮಳೆಯಿಂದಾಗಿ ಗುಜರಾತ್‍ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್‍ಕೋಟ್ ಮತ್ತು ಜಾಮ್‍ನಗರ ಸಂಪೂರ್ಣ ಜಲಾವೃತವಾಗಿವೆ. ಹತ್ತಾರು ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಜುನಾಘಡದಲ್ಲಿ 30 ವರ್ಷದ ಹಳೆಯ ಸೇತುವೆಯೊಂದು ಕೊಚ್ಚಿಹೋಗಿದೆ. ನೀರಿನ ರಭಸಕ್ಕೆ ಟ್ರಕ್ ಪೇಪರ್ ದೋಣಿಯಂತೆ ತೇಲಿ ಹೋಗಿದೆ. ನೀರಿನ ರಭಸಕ್ಕೆ ಸಿಕ್ಕ ವಾಹನದಲ್ಲಿದ್ದವರ ಜೀವ ಉಳಿಯಲೇ ಇಲ್ಲ.