ಮುಂಬೈ, ಸೆ.28- ಶಿವಸೇನೆ ನೇತೃತ್ವದ ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರ ಸದ್ಯದಲ್ಲೇ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಭವಿಷ್ಯ ನುಡಿದಿದ್ದಾರೆ.
ಶನಿವಾರವಷ್ಟೆ ಬಿಜೆಪಿ ಧುರೀಣ ಫಡ್ನವೀಸ್ ಮತ್ತು ಶಿವಸೇನೆ ಪ್ರಭಾವಿ ನಾಯಕ-ಸಂಸದ ಸಂಜಯ್ ರಾವತ್ ನಡುವೆ ನಡೆದ ಮಹತ್ವದ ಸಭೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿಗಳ ಈ ಹೇಳಿಕೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿ ಒಗ್ಗೂಡಿ ರಚಿಸಿರುವ ಮಹಾ ವಿಕಾಸ ಅಗಡಿ (ಎಂವಿಎ) ಸರ್ಕಾರ ಪಕ್ಷಗಳಲ್ಲಿನ ಭಿನ್ನಾಭಿಪ್ರಾಯಗಳಿಂದ ಪತನಗೊಳ್ಳುವುದು ಖಚಿತ ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಿವಸೇನೆ ನೇತೃತ್ವದ ಎಂವಿಎ ಸರ್ಕಾರವನ್ನು ಯಾರೂ ಕೆಡಹುವ ಅಗತ್ಯವಿಲ್ಲ. ಏಕೆಂದರೆ, ಈ ಮೈತ್ರಿಕೂಟ ತಾನಾಗಿಯೇ ಪತನಗೊಳ್ಳಲಿದೆ. ಕಾದು ನೋಡಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನಮಗೆ ಪರ್ಯಾಯ ಸರ್ಕಾರ ರಚಿಸುವ ಆತುರ ಇಲ್ಲ. ನಾವು ಸದ್ಯಕ್ಕೆ ಪ್ರಬಲ ವಿರೋಧ ಪಕ್ಷವಾಗಿಯೇ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು. ಸಂಜಯ್ ರಾವತ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮಿಬ್ಬರ ಭೇಟಿಗೆ ಯಾವುದೇ ರಾಜಕೀಯ ಮಹತ್ವ ಬೇಡ.
ಏಕೆಂದರೆ, ಸಂಜಯ್ ರಾವತ್ ಅವರು ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ವಿಶೇಷ ಸಂದರ್ಶನ ಮಾಡಲು ನನ್ನನ್ನು ಪಂಚತಾರಾ ಹೊಟೇಲ್‍ಗೆ ಆಹ್ವಾನಿಸಿದ್ದವು. ಅದಕ್ಕಾಗಿ ನಾನು ಹೋಗಿ ವಿಶೇಷ ಸಂದರ್ಶನ ನೀಡಿದ್ದೆನೇ ಹೊರತು ಇದಕ್ಕೆ ಯಾವುದೇ ಮಹತ್ವ ಇಲ್ಲ ಎಂದರು.
ನನ್ನ ಮತ್ತು ಸಂಜಯ್ ರಾವತ್ ನಡುವೆ ಯಾವುದೇ ವೈರತ್ವ ಇಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ರಹಸ್ಯ ಮಾತುಕತೆಯೂ ನಡೆದಿಲ್ಲ. ಇದೊಂದು ಔಪಚಾರಿಕ ಭೇಟಿ ಎಂದು ಫಡ್ನವೀಸ್ ಹೇಳಿದರು.
ಫಡ್ನವೀಸ್ ಜತೆ ಸಭೆ ಕುರಿತು ನಿನ್ನೆ ಪ್ರತಿಕ್ರಿಯೆ ನೀಡಿದ ಸಂಜಯ್ ರಾವತ್ ನಮ್ಮ ಭೇಟಿಗೆ ರಾಜಕೀಯ ಮಹತ್ವ ಇಲ್ಲ. ಬಿಜೆಪಿ ಮತ್ತು ಶಿವಸೇನೆ ಪಕ್ಷಗಳ ತತ್ವ-ಸಿದ್ಧಾಂತಗಳಲ್ಲಿ ಪರಸ್ಪರ ವಿರೋಧಗಳಿವೆಯಾದರೂ ನಮ್ಮಿಬ್ಬರ ನಡುವೆ ಯಾವುದೇ ವೈರತ್ವ ಇಲ್ಲ ಎಂದು ತಿಳಿಸಿದ್ದರು.