ಬೆಂಗಳೂರು: ಅಧಿವೇಶನದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನಲ್ಲೇ ರಾಜ್ಯ ರೈತ ಸಂಘದ ಅಧ್ಯಕ್ಷ ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ಈಗಾಗಲೇ ಫ್ರೀಡಂಪಾರ್ಕ್ ಮತ್ತು ಮೌರ್ಯ ಸರ್ಕಲ್‍ನಲ್ಲಿ ರೈತರು ರಸ್ತೆ ತಡೆಗೆ ಸಜ್ಜಾಗುತ್ತಿದ್ದರು. ಇದೀಗ ಪೊಲೀಸರು ಹಲವು ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಆದರೆ ಈಗಲೇ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು. ಅಲ್ಲದೇ ರಸ್ತೆಯಲ್ಲೇ ಮಲಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ರೈತರನ್ನು ತಡೆದಿದ್ದಾರೆ. ಆಗ ನೂಕು-ನುಗ್ಗಲು ಉಂಟಾಗಿದ್ದು, ರೈತರು ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಾರೆ.ಮೌರ್ಯ ಸರ್ಕಲ್ ರಸ್ತೆಯಲ್ಲಿ ರೈತರು ಕುಳಿತುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಕೊನೆಗೆ ಪೊಲೀಸರು ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 2 ಬಸ್ಸುಗಳಲ್ಲಿ ಪೊಲೀಸರು ರೈತರನ್ನ ಕರೆದುಕೊಂಡು ಹೋಗಿದ್ದಾರೆ.
ಸೋಮವಾರ ಬಂದ್‍ಗೆ ಕರೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಮ್ಮ ಒತ್ತಾಯಕ್ಕೆ ಮಣಿದು ಮಸೂದೆಯನ್ನ ತಡೆ ಹಿಡಿಯಬಹುದು ಎಂಬ ವಿಶ್ವಾಸವಿತ್ತು. ಆದರೆ ಸರ್ಕಾರದ ಮೊಸಳೆ ಕಣ್ಣೀರು ಎಂಬುವುದು ಖಚಿತವಾಗಿದೆ. ಬೀದಿಯಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೂ ನಮ್ಮನ್ನ ಮಾತನಾಡಿಸಲು ಸರ್ಕಾರ ಮುಂದಾಗಿಲ್ಲ. ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದರು.