ಕೊಲ್ಲಾಪುರ – ಕೊಲ್ಲಾಪುರ ಜಿಲ್ಲೆಯ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೆಬ ಜೊಲ್ಲೆ ಪ್ರವಾಹದ ಕುರಿತು ಚರ್ಚಿಸಿದರು.
ಕೊಲ್ಲಾಪುರ ಜಿಲ್ಲೆಯ ನೀರಾವರಿ ಇಲಾಖೆಯ ಸಿಂಚನ ಭವನಕ್ಕೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ಹೃತ್ಪೂರ್ವಕ ಸ್ವಾಗತಿಸಿದರು. ನಂತರ ಅಧಿಕಾರಿಗಳೊಂದಿಗೆ ಮಹಾಪುರದ ಕುರಿತು ಸುದೀರ್ಘ ಚರ್ಚೆನಡೆಸಿ, ಮುಖ್ಯವಾದ ಮಾಹಿತಿಗಳನ್ನು ಪಡೆದುಕೊಂಡು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಭಾರೀ ಮಳೆಯಿಂದ ಸಂಭವಿಸುತ್ತಿರುವ ಅನಾಹುತಗಳ ತೀವ್ರತೆಯನ್ನು ಮನಗಂಡು, ನಿತ್ಯ ಮಳೆಯ ಪ್ರಮಾಣ, ರಾಧಾನಗರಿ ಹಾಗೂ ಕಾಳಮ್ಮವಾಡಿ ಅಣೆಕಟ್ಟುಗಳ ನೀರಿನ ಸಂಗ್ರಹ ಮತ್ತು ನದಿ ನೀರು ಬಿಡುಗಡೆ, ನೀರಾವರಿಗೆ ಲಭ್ಯವಿರುವ ನೀರಿನ ಪ್ರಮಾಣ, ಪ್ರವಾಹ ನಿಯಂತ್ರಣ ವ್ಯವಸ್ಥೆ ಕುರಿತು ಚರಚಿಸಲಾಯಿತು.
ಹಿರಣ್ಯಕೇಶಿ ನದಿಯ ಹಳೆಯ ಅಣೆಕಟ್ಟು ಇರುವ ಗೋಟೂರು ಮತ್ತು ನಾಗನೂರು ಪ್ರದೇಶಗಳಲ್ಲಿ ಪ್ರವಾಹದ ಮಟ್ಟ ಹೆಚ್ಚಿಸುತ್ತಿದ್ದು, ಅದನ್ನು ಕೆಡವಿ ತೆಗೆಯಲು ಕರ್ನಾಟಕದ ಅಧಿಕಾರಿಗಳಿಗೆ ಸೂಚನೆ ನೀಡುವ ಹಕ್ಕನ್ನು ಸಚಿವರಿಗೆ ನೀಡುವ ಕುರಿತು ಚರ್ಚಿಸಿ, ತೆಗೆದುಕೊಳ್ಳಲಾಗಿರುವ ಅತ್ಯುನ್ನತ ಕ್ರಮಗಳನ್ನು ಪ್ರಶಂಸಿಸಲಾಯಿತು.
ಮುಂದಿನ ದಿನಗಳಲ್ಲಿ ಉಸ್ತುವಾರಿ ಜಿಲ್ಲೆಯಾದ ವಿಜಯಪುರದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಆಲಮಟ್ಟಿ ಜಲಾಶಯ ನೀರು ಬಿಡುಗಡೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಕುರಿತು ಚರ್ಚಿಸಲಾಗುತ್ತದೆ.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಮಹೇಶ ಸುರವೆ, ಕಾರ್ಯನಿರ್ವಾಹಕ ಇಂಜಿನಿಯರಗಳಾದ ಅಮೋಲ ನಾಯಕ, ರೋಹಿತ ಬಂಡಿವಾಡೇಕರ್, ಸ್ಮಿತಾ ಮಾನೆ ಉಪಸ್ಥಿತರಿದ್ದರು.