ಹಾವೇರಿ: ಜಿಲ್ಲೆಗೆ ಮತ್ತೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ. 9 ವರ್ಷದ ಬಾಲಕ ಹಾಗೂ ಪೊಲೀಸ್ ಕಾನ್‍ಸ್ಟೇಬಲ್ ನಲ್ಲಿ ಸೋಂಕು ದೃಢಪಟ್ಟಿದೆ.
41 ವರ್ಷದ ಕಾನಸ್ಟೇಬಲ್ ಪಿ-7030ರಲ್ಲಿ ಸೋಂಕು ದೃಢಪಟ್ಟಿದ್ದು, ಹಾವೇರಿ ಜಿಲ್ಲೆ ಬ್ಯಾಡಗಿ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲತಃ ಕದರಮಂಡಲಿ ಗ್ರಾಮದ ನಿವಾಸಿಯಾಗಿದ್ದು, ಎರಡು ದಿನ ರಜೆ ಹಾಕಿ ದಾವಣಗೆರೆ ಜಿಲ್ಲೆ ಮಲೇಬೆನ್ನೂರಿಗೆ ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲದೇ ತನ್ನ ಮಗನನ್ನು ಮಲೇಬೆನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಎರಡು ಬಾರಿ ಔಷಧಿ ತರಲು ಆಸ್ಪತ್ರೆಗೆ ಹೋಗಿದ್ದರು ಎನ್ನಲಾಗಿದೆ.
ಬ್ಯಾಡಗಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 74ಕ್ಕೂ ಅಧಿಕ ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ದ್ವೀತಿಯ ಸಂಪರ್ಕ ಹೊಂದಿದ್ದ 4 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಒಂಬತ್ತು ವರ್ಷದ ಪಿ-7031ರಲ್ಲಿ ಸೋಂಕು ದೃಢಪಟ್ಟಿದ್ದು, ಬಾಲಕ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಕಲಾಲ ಪ್ಲಾಟ್‍ನ ನಿವಾಸಿ ಎನ್ನಲಾಗಿದೆ.
ಪಿ-5004ರ ಕೆ.ಎಸ್.ಆರ್.ಟಿ.ಸಿ ಮೆಕಾನಿಕ್ ಸಂಪರ್ಕ ಹೊಂದಿದ್ದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿತರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 27ಕ್ಕೆ ಏರಿಕೆ ಆಗಿದೆ.