ಹಾವೇರಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾನುವಾರ ಬೆಳಗ್ಗೆ ಆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು. ವಧು–ವರ ಇಬ್ಬರೂ ಇಷ್ಟು ಹೊತ್ತಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಅಷ್ಟರಲ್ಲಿ ಆವರಿಸಿದ ಕೋವಿಡ್ ಸೋಂಕಿನ ಛಾಯೆ ಎಲ್ಲವನ್ನೂ ಹಾಳು ಮಾಡಿದೆ.
ಹಾವೇರಿ ನಗರದ ಶಿವಾಜಿ ನಗರದ ಯುವಕನ ಜೊತೆ ನಾಗೇಂದ್ರ ಮಟ್ಟಿ ಪ್ರದೇಶದ ಯುವತಿಯ ಮದುವೆ ನಿಶ್ಚಯವಾಗಿತ್ತು. ಇತ್ತ ಮದುಮಗ ಹಾಗೂ ಸಂಬಂಧಿಕರು ಶಿವಾಜಿ ನಗರಕ್ಕೆ ಬಂದಿದ್ದರು. ಇನ್ನೇನು ಭಾನುವಾರ ಬೆಳಗ್ಗೆ ಮುಹೂರ್ತ ನೆರವೇರಬೇಕಿತ್ತು. ಅಷ್ಟರಲ್ಲಿ ವಧುವಿನ ಅಕ್ಕನಿಗೆ ಕೋವಿಡ್-19 ಸೋಂಕು ಪಾಸಿಟಿವ್ ಇದೆ ಎಂಬ ಮಾಹಿತಿ ಬಂದಿತು. ರಾತ್ರಿಯೇ ಮದುವೆ ಮನೆಗೆ ಭೇಟಿ ನೀಡಿದ ತಾಲೂಕು ಆಡಳಿತ ಸಿಬ್ಬಂದಿ ಮದುವೆ ರದ್ದು ಮಾಡಿ ಸಂಬಂಧಿಕರನ್ನು ವಾಪಸ್ ಕಳುಹಿಸಿದರು. ವಧುವಿನ ಅಕ್ಕ ಹಾವೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತೆಯ ಸಂಪರ್ಕದಲ್ಲಿದ್ದ 20 ಮಂದಿಯನ್ನ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅಲ್ಲದೇ ಸೋಂಕಿತೆ ವಾಸವಿದ್ದ ಏರಿಯಾವನ್ನ ಸೀಲ್ಡೌನ್ ಮಾಡಲಾಗಿದೆ. ಈ ಮೂಲಕ ಖುಷಿಯಿಂದ ತುಂಬಿದ್ದ ಮದುವೆ ಮನೆಯಲ್ಲಿ ಆತಂಕದ ಛಾಯೆ ಆವರಿಸಿದೆ. ಮದುವೆ ಮನೆಯಲ್ಲಿ ಸಂಭ್ರಮ ಇಲ್ಲದೆ, ಜನರಿಲ್ಲದೆ, ಮದುವೆಯನ್ನ ಮುಂದಕ್ಕೆ ಹಾಕಲಾಗಿದೆ. ಆ. 2ರವರೆಗೆ ರಾಜ್ಯವ್ಯಾಪಿ ಸಂಡೇ ಲಾಕ್ಡೌನ್; ಜು. 10ರಿಂದ ಆ. 8ರವರೆಗೆ ಸರ್ಕಾರಿ ಕಚೇರಿ ವಾರಕ್ಕೆರಡು ದಿನ ಬಂದ್
ಹಾವೇರಿ ಜಿಲ್ಲೆಯಲ್ಲಿ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗ್ರೀನ್ ಝೂನ್ ಜಿಲ್ಲೆ ಹಾವೇರಿ ಇದೀಗ ದಿನ ಒಂದಕ್ಕೆ 10 ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ದಾಖಲಾತ್ತಿವೆ. ನೂರಾರು ಕನಸುಹೊತ್ತು ಸಪ್ತಪದಿಗೆ ಹೆಜ್ಜೆ ಹಾಕುವ ಸಂಭ್ರಮದ ಕ್ಷಣಕ್ಕೂ ಕೋವಿಡ್-19 ಭೀತಿ ಅಡ್ಡಿಪಡಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸದ್ಯ ಕೊರೋನಾ ರೌದ್ರ ತಾಂಡವ ಆಡುತ್ತಿದ್ದು ಜನರು ಇನ್ನಷ್ಟು ಜಾಗೃತರಾಗಬೇಕಿದೆ.