ಧಾರವಾಡ/ಹುಬ್ಬಳ್ಳಿ: ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹುಬ್ಬಳ್ಳಿಯ ಬಸವ ವನದ 80 ವರ್ಷದ ಅಜ್ಜಿ ಮನೆಯಿಂದ ಹೊರ ಬಾರದಂತಾಗಿದೆ.
80 ವರ್ಷದ ಪ್ರೇಮಾ ಬಾಯಿ ಅಜ್ಜಿ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಹುಬ್ಬಳ್ಳಿಯ ಬಸವ ವನದ ಬಳಿ ಇರುವ ಅಜ್ಜಿ ಮನೆ ಸಂಪೂರ್ಣವಾಗಿ ಜಲಾವೃತವಾಗಿದೆ. ಅಜ್ಜಿಯ ಮನೆಯ ಹಿಂಭಾಗದಲ್ಲಿ ಪೊಲೀಸ್ ವಸತಿ ನಿಲಯಗಳಿವೆ. ಇಲ್ಲಿಂದ ಹೊರಹೋಗಬೇಕಿದ್ದ ಚರಂಡಿ ನೀರು ಅಜ್ಜಿಯ ಮನೆಯಂಗಳದಲ್ಲಿ ಬಂದು ನಿಲ್ಲುತ್ತಿದೆ. ಇದರಿಂದಾಗಿ ಅಜ್ಜಿ ಮನೆ ಬಿಟ್ಟು ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ರು ಡೋಂಟ್ ಕೇರ್ ಅಂತಿದ್ದಾರೆ.
ಮನೆಯ ಸುತ್ತಲು ಒಳಚರಂಡಿ ನೀರು ಆವರಿಸಿಕೊಂಡಿದೆ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡೆ ಬದುಕಬೇಕು. ಮೊದಲು ಮನೆಯಿಂದ ಕಷ್ಟ ಪಟ್ಟು ಹೊರಗೆ ಬರುತ್ತಿದ್ದ ಅಜ್ಜಿ ಇದೀಗ ನಡೆದಾಡೋಕು ಕಷ್ಟ ಪಡುವಂತಾಗಿದೆ. ಕೊರೊನಾ ಹಾವಳಿ ಸಮಯದಲ್ಲಿ ಅಜ್ಜಿಯ ಸ್ಥಿತಿಯಂತೂ ಕೇಳೋರೆ ಇಲ್ಲದಾಗಿದೆ. ಹೀಗಾಗಿ ಹೊರಗೆ ಬರಬೇಕು ಅಂತ ಯತ್ನಿಸಿದಾಗ ಅಲ್ಲಿಯೇ ಜಾರಿ ಬಿದ್ದು ಮೈ ಎಲ್ಲ ಗಾಯ ಮಾಡಿಕೊಂಡಿದ್ದಾರೆ. ಈ ವೃದ್ಧೆಯ ನೆರವಿಗೆ ಅಧಿಕಾರಿಗಳು ಬರಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.