ನವದೆಹಲಿ: ಮಹಾರಾಷ್ಟ್ರದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ಸೋಂಕಿನಿಂದ ತತ್ತರಿಸಿದೆ. ದೆಹಲಿಯಲ್ಲಿ ಜುಲೈ ಆರಂಭದಿಂದ ಸೋಂಕಿನ ಪ್ರಮಾಣ ತೀವ್ರ ಏರಿಕೆ ಕಂಡು ಬರುತ್ತಿದ್ದು ಸದ್ಯ 80 ಸಾವಿರ ಗಡಿ ದಾಟಿರುವ ದೆಹಲಿಯಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿಬಿಪಿ(ಇಂಡೋ ಟಿಬೆಟಿಯನ್-ಬಾರ್ಡರ್ ಪೊಲೀಸ್) ಪಡೆ 10 ದಿನದಲ್ಲೇ 10 ಸಾವಿರ ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಿದೆ.
ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ ಸುಮಾರು 5.5 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕೇಂದ್ರದ ನೆರವಿವೊಂದಿಗೆ ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಆರಂಭಿಸಿದೆ.
ದೆಹಲಿಯಲ್ಲಿ ಆಸ್ಪತ್ರೆ ಹಾಗೂ ಬೆಡ್‍ಗಳ ಕೊರತೆ ಎದುರಿಸುತ್ತಿದ್ದು, ಇದನ್ನು ನೀಗಿಸಲು ವಿಶ್ವದ ಅತಿದೊಡ್ಡ ತಾತ್ಕಾಲಿಕ ಕೊರೊನಾ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ದಕ್ಷಿಣ ದೆಹಲಿಯ ಛತ್ತರಪುರ್‍ನಲ್ಲಿರುವ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕಾಂಪ್ಲೆಕ್ಸ್‍ನಲ್ಲಿ 10,200 ಬೆಡ್‍ಗಳ ಬೃಹತ್ ಕೊರೊನಾ ಆಸ್ಪತ್ರೆಯನ್ನು ಸುಮಾರು ಹತ್ತು ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಉಸ್ತುವಾರಿಯಲ್ಲಿ ಐಟಿಬಿಪಿ ಪಡೆಯ ವೈದ್ಯಕೀಯ ಸಿಬ್ಬಂದಿ ಈ ಬೃಹತ್ ಆಸ್ಪತ್ರೆಯನ್ನು ನಿಭಾಯಿಸಲಿದ್ದಾರೆ. 10,200 ಬೆಡ್‍ಗಳನ್ನು ಹೊಂದಿರುವ ಈ ಆಸ್ಪತ್ರೆ ಸುಮಾರು ಹದಿನೈದು ಫುಟ್‍ಬಾಲ್ ಸ್ಟೇಡಿಯಂಗಳಿಗೆ ಸಮವಾಗಿದೆ. ಚೀನಾದ ವುಹಾನ್‍ನಲ್ಲಿ ನಿರ್ಮಿಸಿದ್ದ ದೊಡ್ಡ ತಾತ್ಕಾಲಿಕ ಆಸ್ಪತ್ರೆಗಿಂತ ಹತ್ತು ಪಟ್ಟು ದೊಡ್ಡದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗೆ ನಿರ್ಮಾಣವಾಗಿರುವ ಆಸ್ಪತ್ರೆಗೆ ‘ಸರ್ದಾರ್ ಪಟೇಲ್ ಕೋವಿಡ್ ಕೇರ್’ ಎಂದು ಕೇಂದ್ರ ಸರ್ಕಾರ ನಾಮಕರಣ ಮಾಡಿದೆ.
ಆಸ್ಪತ್ರೆ ವಿಶೇಷತೆಗಳೇನು?
* 1.10.554 ಚದುರು ಮೀಟರ್ ವಿಸ್ತೀರ್ಣದಲ್ಲಿ ಈ ಆಸ್ಪತ್ರೆ ನಿರ್ಮಾಣ.
* ಒಟ್ಟು 10,200 ಬೆಡ್‍ಗಳ ವ್ಯವಸ್ಥೆ.
* 44 ನರ್ಸಿಂಗ್ ಕೇಂದ್ರಗಳು ಒಳಗೊಂಡಿದೆ.
* ರೋಗಿಗಳಿಗೆ 88 ಆವರಣಗಳನ್ನು ನಿರ್ಮಾಣ ಮಾಡಿದೆ.
* ಇಲ್ಲಿ 800 ಮಂದಿ ಸಾಮಾನ್ಯ, 70 ಮಂದಿ ತಜ್ಞ ವೈದ್ಯರು ಕಾರ್ಯ ನಿರ್ವಹಿಸಲಿದ್ದಾರೆ.
* 25 ಮಂದಿ ಆಸ್ಪತ್ರೆ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.
* 1,375 ಮಂದಿ ಸ್ಟಾಫ್ ನರ್ಸ್‍ಗಳಿದ್ದು, 20 ಔಷಧಿ ಕೇಂದ್ರಗಳನ್ನು ಸ್ಥಾಪಿಸಿದೆ.
* ಸೋಂಕಿತರಿಗೂ ಹಾಗೂ ಕೊರೊನಾ ಲಕ್ಷಣವಿಲ್ಲದ ಸೋಂಕಿತರಿಗೂ ಪ್ರತ್ಯೇಕ ವಾರ್ಡ್.
ಹತ್ತು ದಿನದಲ್ಲಿ ನಿರ್ಮಾಣವಾಗಿದ್ದು ಹೇಗೆ?
ದೇಶದಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವ ಎರಡನೇ ರಾಜ್ಯ ದೆಹಲಿಯಾಗಿದ್ದು, ಜುಲೈ ಅಂತ್ಯಕ್ಕೆ 5.5 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ. ಸುಮಾರು 15000 ಬೆಡ್‍ಗಳ ಅವಶ್ಯಕತೆ ಇದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದರು.
ಈ ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ 600 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 70 ಸಂಚಾರಿ ಶೌಚಾಲಯಗಳು ಇರಲಿವೆ. ಜೊತೆಗೆ 400 ಕಂಪ್ಯೂಟರ್ ಗಳನ್ನು ಆಳವಡಿಸಲಾಗಿದೆ. ಸುಮಾರು 400 ವೈದ್ಯರು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಪ್ರತೀ ಬೆಡ್‍ಗೆ ಮೊಬೈಲ್ ಹಾಗೂ ಲಾಪ್ ಟಾಪ್ ಚಾರ್ಜರ್, ಒಂದು ಸ್ಟೂಲ್ ಹಾಗೂ ಕುರ್ಚಿ, ಕಸದ ತೊಟ್ಟಿ, ಪಾತ್ರೆಗಳು ಹಾಗೂ ನೆರ್ಮಲ್ಯ ಸಾಧನಗಳು ಇರಲಿವೆ.
ಈ ವರದಿ ಬೆನ್ನಲ್ಲೇ ಸಿಎಂ ಅರವಿಂದ ಕೇಜ್ರಿವಾಲ್ ಪರಿಸ್ಥಿತಿ ನಿಭಾಯಿಸಲು ನೆರವಾಗುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಮನವಿ ಮೇರೆಗೆ ಜೂನ್ 14ರಂದು ಗೃಹ ಸಚಿವ ಅಮಿತ್ ಶಾ, ಸಿಎಂ ಅರವಿಂದ್ ಕೇಜ್ರಿವಾಲ್, ಆರೋಗ್ಯ ಸಚಿವ ಸತ್ಯಂದ್ರ ಜೈನ್, ತುರ್ತು ನಿರ್ವಹಣಾ ಪ್ರಾಧಿಕಾರ ಒಳಗೊಂಡಂತೆ ದೆಹಲಿ ಹಿರಿಯ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು.
ಸಭೆಯಲ್ಲಿ ಟೆಸ್ಟಿಂಗ್‍ಗಳನ್ನು ಹೆಚ್ಚಿಸುವುದು ಮತ್ತು ಬೆಡ್‍ಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಬದಲಾಗಿತ್ತು. ತುರ್ತು ಅನುಕೂಲಕ್ಕಾಗಿ ಐಸೋಲೇಷನ್ ವಾರ್ಡ್‍ಗಳಾಗಿ ಬದಲಾಯಿಸಿದ್ದ 500 ರೈಲ್ವೆ ಕೊಚ್‍ಗಳನ್ನು ನೀಡಲಾಗಿತ್ತು.