ಗಡಿಯಲ್ಲಿ ಕದನ ಕಾರ್ಮೋಡ, ರಕ್ಷಣಾ ಸಚಿವರ ಮಹತ್ವದ ಮೀಟಿಂಗ್..!
ನವದೆಹಲಿ,ಜೂ.21-ಪೂರ್ವ ಲಡಾಕ್‍ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ಹಿಂಸಾತ್ಮಕ ಸಂಘರ್ಷದ ನಂತರ ಗಡಿಭಾಗದಲ್ಲಿ ಯುದ್ಧದ ಕಾರ್ಮೋಡಗಳು ದಟ್ಟವಾಗಿ ಕವಿದಿದ್ದು, ಉಭಯ ದೇಶಗಳ ಸೇನಾಪಡೆಗಳು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿವೆ.
ಇದೇ ವೇಳೆ ಚೀನಾದಿಂದ ಎದುರಾಗಬಹುದಾದ ಯಾವುದೇ ದುಸ್ಸಾಹಸದ ಸನ್ನಿವೇಶ ಎದುರಿಸಲು ಭಾರತ ಸಂಪೂರ್ಣ ರೀತಿಯಲ್ಲಿ ಸಜ್ಜಾಗಿದೆ. ಈ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿ ಇಂಡೋ-ಚೀನಾ ಗಡಿಭಾಗದಲ್ಲಿನ ಪ್ರಸ್ತುತ ಪರಿಸ್ಥಿತಿ ಬಗ್ಗೆ ಗಂಭೀರ ಸಮಾಲೋಚನೆ ನಡೆಸಿದರು.
ಭಾರತ ಸೇನಾಪಡೆಗಳ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್, ಭೂ ಸೇನೆ ಮುಖ್ಯಸ್ಥ ಜನರಲ್ ಮುಕುಂದ್ ಮನೋಹರ್ ನರವಣೆ, ವಾಯುಪಡೆ ಮುಖ್ಯಸ್ಥ ರಾಕೇಶ್‍ಕುಮಾರ್ ಸಿಂಗ್ ಬಧೌರಿಯ ಮತ್ತು ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಕರಮ್‍ಭೀರ್ ಸಿಂಗ್ ಸಭೆಯಲ್ಲಿ ಪಾಲ್ಗೊಂಡು ರಕ್ಷಣಾ ಸಚಿವರಿಗೆ ಗಡಿಭಾಗದ ಪರಿಸ್ಥಿತಿ ಮತ್ತು ಅಲ್ಲಿ ಕೈಗೊಂಡಿರುವ ಸಕಲ ಸಿದ್ದತೆಗಳನ್ನು ಕುರಿತು ಮಾಹಿತಿ ನೀಡಿದರು.
ನಿನ್ನೆಯಷ್ಟೇ ವಾಯುಪಡೆಯ ಮುಖ್ಯಸ್ಥರು ಚೀನಾದಿಂದ ಎದುರಾಗಬಹುದಾದ ಯಾವುದೇ ಸನ್ನಿವೇಶವನ್ನು ಎದುರಿಸಲು ನಮ್ಮ ಪಡೆ ಸರ್ವಸನ್ನದ್ದವಾಗಿದೆ. ಇಂಡಿಯನ್ ಏರ್‍ಫೆರ್ಸ್‍ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್‍ಗಳು ಗಸ್ತು ಹಾರಾಟ ನಡೆಸುತ್ತಿವೆ ಎಂದು ತಿಳಿಸಿದರು.
ಮಾತಿಗೆ ತಪ್ಪಿರುವ ಚೀನಾ ಪೂರ್ವ ಲಡಾಕ್‍ನ ಕೆಲವು ಪ್ರದೇಶಗಳಿಂದ ಹಿಂದಕ್ಕೆ ಸರಿಯುವ ಮೊದಲು ಭಾರೀ ಸಂಖ್ಯೆ ಸೈನಿಕರು ಮತ್ತು ದೈತ್ಯ ಯುದ್ಧಾಸ್ತ್ರಗಳನ್ನು ಜಮಾವಣೆಗೊಳಿಸಿದೆ.
ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ಸೇನಾಪಡೆಗಳಿಗೆ ಸೆಡ್ಡು ಹೊಡೆದಿರುವ ಭಾರತೀಯ ಮೂರು ಸಶಸ್ತ್ರ ಪಡೆಗಳು ಸಹ ಲಡಾಕ್ ಮತ್ತು ಸಿಕ್ಕಿಮ್ ಮತ್ತಿತರ ಇಂಡೋ ಚೈನಾ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಸಜ್ಜುಗೊಂಡಿದೆ.
ಉಭಯ ದೇಶಗಳ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸಲು ವಿಶ್ವಸಂಸ್ಥೆ, ಅಮೆರಿಕ ಸೇರಿದಂತೆ ಅನೇಕ ದೇಶಗಳು ನಿರಂತರ ಪ್ರಯತ್ನಗಳನ್ನು ಮುಂದುವರೆಸುತ್ತಿವೆ. ಇಂಡೋ-ಚೀನಾ ಗಡಿಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಆರಂಭವಾಗಬಹುದಾದ ಶಸ್ತ್ರಾಸ್ತ್ರ ಸಂಘರ್ಷವನ್ನು ತಪ್ಪಿಸಲು ಅನೇಕ ರಾಷ್ಟ್ರಗಳನ್ನು ಮುಂದಾಗಿವೆ.