ಚೆನ್ನೈ, ಜೂ.10- ಡೆಡ್ಲಿ ಕೊರೊನಾ ಸೋಂಕಿಗೆ ಡಿಎಂಕೆ ಮುಖಂಡ ಮತ್ತು ಶಾಸಕ ಜೆ. ಅನ್ಬಳಗನ್(62) ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅನ್ಬಳಗನ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟರು.
ಮಧುಮೇಹ, ಅಕ ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡ ಸಮಸ್ಯೆಗಳಿಂದ ಬಳಸುತ್ತಿದ್ದ ಅವರಿಗೆ ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ವೈರಸ್ ಇರುವುದು ದೃಢಪಟ್ಟಿತ್ತು.
ಕೊರೊನಾ ಸೋಂಕು ತಗುಲಿದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಎಂಕೆ ಶಾಸಕರನ್ನು ವೆಂಟಿಲೇಟರ್ (ಪ್ರಾಣವಾಯು) ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.
ಮೊನ್ನೆಯಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನಿನ್ನೆ ಮಧ್ಯಾಹ್ನ ಅವರ ಆಮ್ಲಜನಕದ ಪ್ರಮಾಣದ ಅರ್ಧಕ್ಕೆ ಇಳಿದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ನಿನ್ನೆ ಸಂಜೆಯಿಂದ ಅವರ ಆರೋಗ್ಯ ವಿಷಮ ಹಂತ ತಲುಪಿತ್ತು. ಅವರ ಉಸಿರಾಟ ಸುಧಾರಣೆಗೆ ವೈದ್ಯರ ತಂಡದ ಪ್ರಯತ್ನ ಸಫಲವಾಗಲಿಲ್ಲ.
ಗಣ್ಯರ ಶೋಕ: ಅನ್ಬಳಗನ್ ನಿಧನಕ್ಕೆ ಮುಖ್ಯಮಂತಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿರೋಧಪಕ್ಷದ ನಾಯಕ ಕೆ.ಸ್ಟಾಲಿನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.