ಬೆಂಗಳೂರು: ಒಂದು ಮಗುವಿನ ಆಗಮನ ಅಂದ್ರೆ ಆ ಮನೆ ತುಂಬಾ ಸಂತೋಷ ತುಂಬಿರುತ್ತದೆ. ಇನ್ನು ತಾಯಿಗಂತೂ ಅದು ಮರುಜನ್ಮ, ಒಂಬತ್ತು ತಿಂಗಳು ಹೊತ್ತು, ಹೆರಿಗೆ ನೋವು ಸಹಿಸಿಕೊಂಡ ಆಕೆಗೆ, ಬಳಿಕ ಆ ಮಗುವಿನ ಮುಕ ನೋಡಿ, ಒಮ್ಮೆ ಮಗುವನ್ನು ಮುದ್ದಾಡಿದರೇ ಎಲ್ಲ ನೋವು ಶಮನ. ಆದ್ರೆ ದುರಾದೃಷ್ಟವಶಾತ್ ಈ ತಾಯಿಗೆ ಆ ಸಂತೋಷ ಸಿಗದಂತಾಗಿದೆ. ಈ ಕಥೆ ಓದಿದ್ರೆ ನಿಜಕ್ಕೂ ಕಣ್ಣೀರು ಬರುತ್ತದೆ. ಕೊರೊನಾ ತಂದಿಟ್ಟ ಪರಿಸ್ಥಿತಿ ನೋಡಿದರೆ ನಿಜಕ್ಕೂ ಕರಳು ಹಿಂಡಿದಂತಾಗುತ್ತೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 1 ರಂದು 17 ದಿನದ ಕಂದಮ್ಮ ಕೊರೊನಾದಿಂದ ಸಾವನ್ನಪ್ಪಿದೆ. ಒಂದೆಡೆ ಮಗುವಿನ ತಂದೆ ಹಾಗೂ ತಾಯಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಇರುವುದರಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಸಾವನ್ನಪ್ಪಿದ ಕಂದಮ್ಮನನ್ನು ಆಯಂಬುಲೆನ್ಸ್ ಸಿಬ್ಬಂದಿ ಪುಟ್ಟ ಕವರ್ನಲ್ಲಿ ಸುತ್ತಿಕೊಂಡು ಹೆಬ್ಬಾಳದ ವಿದ್ಯುತ್ ಚಿತಾಗಾರಕ್ಕೆ ತಂದಿದ್ದರು. ತಂದೆ ತಾಯಿಯಿದ್ದರೂ ಸಹ ಅನಾಥ ಶವದಂತೆ ನಡೆದು ಹೋದ ಕಂದನ ಅಂತ್ಯಕ್ರಿಯೆ ನೋಡಿ ಸಿಬ್ಬಂದಿ ಕೂಡ ಕಣ್ಣೀರು ಹಾಕಿದ್ರು. ಅಲ್ಲದೇ ಚಿತಾಗಾರ ನಿರ್ವಹಣೆ ಮಾಡುವ ಸುರೇಶ್ ಸರ್ಕಾರಿ ಶುಲ್ಕವನ್ನು ಪಡೆಯದೇ ಸರ್ಕಾರಿ ಶುಲ್ಕ ತಾವೇ ಭರಿಸಿ ಅಂತ್ಯಕ್ರಿಯೆ ನಡೆಸಿಕೊಟ್ಟು ಮಾನವೀಯತೆ ಮೆರೆದರು. ಒಟ್ಟಾರೆ ಮನೆ ಸಂತಸ ತುಂಬ ಬೇಕಿದ್ದ, ತಾಯಿ ಗರ್ಭದಲ್ಲಿ ಸುರಕ್ಷತವಾಗಿದ್ದ ಕಂದಮ್ಮ, ಕಣ್ಣು ಬಿಟ್ಟು ಜಗತ್ತು ನೋಡವ ಮೊದಲೇ ಕೊರೊನಾ ಮಹಾಮಾರಿಗೆ ಸಾವನ್ನಪ್ಪಿದೆ.