ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಕರ್ನಾಟಕ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದೆ. ರಾಜ್ಯದಲ್ಲಿ ಸೋಂಕಿನ ಸರಾಸರಿ ಪಾಸಿಟಿವಿಟಿ ಪ್ರಮಾಣ ದುಪ್ಪಟ್ಟಾಗಿದೆ.
ಕಳೆದ ಜು.10ರವರೆಗೆ ಪ್ರತಿ 100 ಪರೀಕ್ಷೆಗಳಲ್ಲಿ ಸರಾಸರಿ ಶೇ.4.18ರಷ್ಟಿದ್ದ ಪಾಸಿಟಿವಿಟಿ ದರ ಇದೀಗ ಶೇ.8.60ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕಳೆದ 18 ದಿನಗಳಲ್ಲಿ ಪ್ರತಿ 100 ಪರೀಕ್ಷೆಗಳಲ್ಲಿ ಸರಾಸರಿ ಶೇ.16.88 ಮಂದಿಗೆ ಸೋಂಕು ದೃಢಪಡುವ ಮೂಲಕ ಆತಂಕ ಹೆಚ್ಚಾಗುವಂತೆ ಮಾಡಿದೆ.
ರಾಜ್ಯದಲ್ಲಿ ಜು.10ರವರೆಗೆ ಪಾಸಿಟಿವಿಟಿ ದರ ಶೇ.4.18ರಷ್ಟು ಮಾತ್ರ ಇತ್ತು. ಜುಲೈ.10ರವರೆಗೆ 7.98 ಲಕ್ಷ ಪರೀಕ್ಷೆ ನಡೆಸಿದ್ದರೆ, 33,418 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿತ್ತು.
ಇದೀಗ ಜುಲೈ.28ರ ವೇಳೆಗೆ 12.42 ಲಕ್ಷ ಪರೀಕ್ಷೆ ನಡೆಸಿದ್ದು, 1,07,001 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪ್ರತಿ 100 ಪರೀಕ್ಷೆಯಲ್ಲಿ ಶೇ.8.60 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಆತಂಕಕಾರಿ ವಿಚಾರವೆಂದರೆ ಜುಲೈ.10ರಿಂದ ಕಳೆದ 18 ದಿನಗಳಲ್ಲಿ 4,03,697 ಪರೀಕ್ಷೆಯಲ್ಲಿ ನಡೆಸಿದ್ದು ಬರೋಬ್ಬರಿ 68,158 ಮಂದಿಗೆ ಸೋಂಕು ದೃಢಪಟ್ಟಿದೆ.