ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 228 ಮಂದಿಗೆ ಕೋವಿಡ್-19 ದೃಢಪಟ್ಟಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ನೀಡಿರುವ ಮಾಹಿತಿ ಪ್ರಕಾರ, ಆಸ್ಪತ್ರೆಗೆ ದಾಖಲಾಗಿದ್ದ 6 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಅಥಣಿ ತಾಲ್ಲೂಕಿನ 58 ವರ್ಷದ ವ್ಯಕ್ತಿ, ಬೈಲಹೊಂಗಲದ 44 ವರ್ಷದ ಪುರುಷ, ಸವದತ್ತಿಯ 65 ವರ್ಷದ ಮಹಿಳೆ, ರಾಯಬಾಗ ತಾಲ್ಲೂಕಿನ ಕುಡಚಿಯ 55 ವರ್ಷದ ಮಹಿಳೆ ಹಾಗೂ 46 ವರ್ಷದ ಪುರುಷ ಹಾಗೂ ಬೆಳಗಾವಿ ತಾಲ್ಲೂಕಿನ 54 ವರ್ಷದ ಪುರುಷ ಮೃತರು. ಇವರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈ ಸೋಂಕಿನ ಕಾರಣದಿಂದ ಮೃತರಾದವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.
34 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಬೆಳಗಾವಿ ನಗರ ಹಾಗೂ ತಾಲ್ಲೂಕು, ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಸವದತ್ತಿ, ರಾಯಬಾಗ, ರಾಮದುರ್ಗ, ಬೈಲಹೊಂಗಲ, ಖಾನಾಪುರ ತಾಲ್ಲೂಕುಗಳಲ್ಲಿ ವಿವಿಧ ಪ್ರದೇಶ ಮತ್ತು ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.