ಬೆಳಗಾವಿ -: ಕೊರೋನಾ ಸಂಕಷ್ಟದಿಂದ ನಲುಗಿಹೋಗಿ ತಿಂಗಳುಗಳೇ ಕಳೆದರೂ ಹಿರೇಬಾಗೇವಾಡಿ ಗ್ರಾಮಕ್ಕೆ ಭೇಟಿ ನೀಡದೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಅವರನ್ನು ಗ್ರಾಮಕ್ಕೆ ಕರೆತರುವಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಯಶಸ್ವಿಯಾಗಿದ್ದಾರೆ.
ಕೋವಿಡ್ -19 ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್ ಅವರೊಂದಿಗೆ ನಿನ್ನೆ ಸುದೀರ್ಘ ಚರ್ಚೆ ನಡೆಸಿದ್ದ ಲಕ್ಷ್ಮಿ ಹೆಬ್ಬಾಳಕರ್, ಹಿರೇಬಾಗೇವಾಡಿ ಜನರು ಪಡುತ್ತಿರುವ ಪಾಡನ್ನು ವಿವರಿಸಿದ್ದರು. ಜಿಲ್ಲಾಡಳಿತ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ವಿಶೇಷವಾಗಿ, ಕೇವಲ 18 ಕಿಮೀ ಅಂತರದಲ್ಲಿದ್ದರೂ ಜಿಲ್ಲಾಧಿಕಾರಿಗಳು ಇಲ್ಲಿಯವರೆಗೂ ಗ್ರಾಮಕ್ಕೆ ಭೇಟಿ ನೀಡದಿರುವದನ್ನೂ ಸೂಚ್ಯವಾಗಿ ಗಮನಕ್ಕೆ ತಂದು ಅಸಮಾಧಾನ ತೋರಿಸಿದ್ದರು.
ಹಿರೇಬಾಗೇವಾಡಿಯಲ್ಲೂ ಗ್ರಾಮಸ್ಥರು ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಇದೆಲ್ಲದರ ಪರಿಣಾಮವಾಗಿ ಶುಕ್ರವಾರ ಬೊಮ್ಮನಳ್ಳಿ ಗ್ರಾಮಕ್ಕೆ ಎಂಟ್ರಿ ಕೊಟ್ಟರು. ಅಲ್ಲದೆ ಲಕ್ಷ್ಮಿ ಹೆಬ್ಬಾಳಕರ್ ಮುಂದಿಟ್ಟ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಜನರಿಗೆ ಭರವಸೆ ನೀಡಿದರು.
 
		 Laxmi News 24×7
Laxmi News 24×7
				 
						
					 
						
					 
						
					