ನವದೆಹಲಿ: ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರೂ. ಮುಟ್ಟಿದೆ. ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯು 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿತು. ಕಡೆಗೆ ಕೊಂಚ ಚೇತರಿಸಿಕೊಂಡು 16 ಪೈಸೆ ಇಳಿಕೆ ಆಗಿ ದಿನ ಅಂತ್ಯಕ್ಕೆ 79.98 ರೂ.ಗೆ ವಿನಿಮಯ ದರ ಸ್ಥಿರಗೊಂಡಿತು.
ಇದೀಗ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಶೇ.0.03 ಕುಸಿತದೊಂದಿಗೆ ಮತ್ತೆ 80.02 ರೂ. ಗಡಿ ದಾಟಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರದ ಏರಿಳಿತದಿಂದ ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.
ಹೀಗಾಗಿ ರೂಪಾಯಿ ಅಧಃಪತನ ಮುಂದುವರಿದು ಈ ವರ್ಷದಲ್ಲಿ ಈವರೆಗೆ ಶೇ. 8ರಷ್ಟು ಕುಸಿತ ಕಂಡಿದೆ. ದೇಶದಲ್ಲಿ ವಿದೇಶಿ ಬಂಡವಾಳ ಹಿಂತೆಗೆತವು ಹೆಚ್ಚಾಗುತ್ತಿದೆ. ವಿದೇಶಿ ಹೂಡಿಕೆದಾರರು ರಾಷ್ಟ್ರದ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿರುವ ಕಾರಣದ ಭಾರತದ ರೂಪಾಯಿ ಮತ್ತೊಂದು ದಾಖಲೆಯ ಕುಸಿತವನ್ನು ಮುಟ್ಟಿದೆ.