ಬೆಂಗಳೂರು: “ರಾಜ್ಯಸಭೆಯಲ್ಲಿ ಈಚೆಗೆ ನಡೆದ ಘಟನೆ ಅತ್ಯಂತ ವಿಷಾದಕರ. ಹೊಣಗೇಡಿತನದಿಂದ ವರ್ತಿಸಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯಸಭೆ ಸಭಾಪತಿ ಹಾಗೂ ಲೋಕಸಭಾಧ್ಯಕ್ಷರನ್ನು ಆಗ್ರಹಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಗಳು ಪ್ರಜಾಪ್ರಭುತ್ವದ ದೇಗುಲಗಳು. ಅಲ್ಲಿ ಈ ರೀತಿ ಬೇಜವಾಬ್ದಾರಿತನದಿಂದ ನಡೆದುಕೊಳ್ಳುವುದು ಅಕ್ಷಮ್ಯ. ಆದ್ದರಿಂದ ಈ ಸಂಬಂಧ ಕ್ರಮಕ್ಕೆ ಆಗ್ರಹಿಸಿ ಸಭಾಪತಿ ಹಾಗೂ ಸಭಾಧ್ಯಕ್ಷರು ಇಬ್ಬರಿಗೂ ಪತ್ರ ಬರೆಯಲಾಗುವುದು. ಅಗತ್ಯಬಿದ್ದರೆ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜನಪ್ರತಿನಿಧಿಗಳಾದವರು ಸಾಮಾನ್ಯ ನಡವಳಿಕೆಗಳ ಪರಿಜ್ಞಾನವೂ ಇಲ್ಲದೆ ಹೀಗೆ ವರ್ತಿಸಬಾರದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜವಾಬ್ದಾರಿಯೂ ಇದೆ. ಯಾಕೆಂದರೆ, ಆ ಪಕ್ಷಗಳಿಂದಲೇ ಇವರೆಲ್ಲರೂ ಆಯ್ಕೆಯಾಗಿರುತ್ತಾರೆ. ಆದ್ದರಿಂದ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಜನ ಕೂಡ ಇದನ್ನು ಪ್ರಶ್ನಿಸುವಂತಹ ವಾತಾವರಣ ನಿರ್ಮಾಣ ಆಗಬೇಕು ಎಂದು ಹೇಳಿದರು.
ಪಕ್ಷದ ಚಿಹ್ನೆ ಮೇಲೆ ಪಾಲಿಕೆ ಚುನಾವಣೆ?
ವರ್ಷವಿಡೀ ಕಾರ್ಯಕ್ರಮ
ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಸಭಾಧ್ಯಕ್ಷರ ಕಚೇರಿ ವತಿಯಿಂದ ವರ್ಷವಿಡೀ ಸ್ವಾತಂತ್ರ್ಯ ದಿನದ “ಅಮೃತ ಮಹೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ. ಆಗಸ್ಟ್ 15ರಂದು ಬ್ಯಾಂಕ್ವೇಟ್ ಹಾಲ್‌ನಲ್ಲಿ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
15ರಂದು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಎದುರು ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಇದೇ ಮೊದಲ ಬಾರಿಗೆ ಬ್ಯಾಂಕ್ವೇಟ್ ಹಾಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದು, ಬಿ.ವಿ. ವಸಂತಕುಮಾರ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಸೆಪ್ಟೆಂಬರ್‌ನಲ್ಲಿ ಅಧಿವೇಶನ?
ಸೆಪ್ಟೆಂಬರ್‌ನಲ್ಲಿ ಅಧಿವೇಶನ ನಡೆಸಲೇಬೇಕಾಗಿದೆ. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
“ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಆಗಬಹುದು. ಅಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಬೆಂಗಳೂರಲ್ಲಿಯೋ ಅಥವಾ ಬೆಳಗಾವಿಯಲ್ಲಿಯೋ ಎಂಬುದನ್ನೂ ಸರ್ಕಾರ ತಿಳಿಸಲಿದೆ. ಅದರಂತೆ ನಾವು ಅಧಿವೇಶನ ನಡೆಸುತ್ತೇವೆ’ ಎಂದರು.
Laxmi News 24×7