ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್(RBI) ಪ್ರಜ್ಞಾಪೂರ್ವಕವಾಗಿಯೇ ಗುಲಾಬಿ ನೋಟುಗಳನ್ನು ಚಲಾವಣೆಯಿಂದ ಹೊರತೆಗೆಯುತ್ತಿದೆ.
2000 ರೂ. ನೋಟುಗಳಿಗೆ ಪಿಂಕ್ ಸ್ಲಿಪ್ ನೀಡುವುದು ಖಚಿತವಾಗಿದೆ. ಚಲಾವಣೆಯಿಂದ 2000 ರೂಪಾಯಿ ನೋಟುಗಳನ್ನು ತೆಗೆದುಹಾಕುವುದು ಖಚಿತವೆನ್ನಲಾಗಿದೆ.
ಗುರುವಾರ ಬಿಡುಗಡೆಯಾದ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, 2021 ರ ಹಣಕಾಸು ವರ್ಷದಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ 57,757 ಕೋಟಿ ನೋಟುಗಳು ಚಲಾವಣೆಯಿಂದ ಹೊರ ಬಂದಿವೆ. 2020 ರ ಹಣಕಾಸು ವರ್ಷದಲ್ಲಿ ಗುಲಾಬಿ ನೋಟುಗಳ ಮೌಲ್ಯ 5,47,952 ಕೋಟಿ ರೂ.ಗಳಾಗಿದ್ದರೆ, ಅದು 2021 ರಲ್ಲಿ 4,90,195 ಕೋಟಿ ರೂ.ಗೆ ಇಳಿದಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 57,757 ಕೋಟಿ ರೂಪಾಯಿಗಳ ನೋಟುಗಳನ್ನು ಚಲಾವಣೆಯಿಂದ ಹೊರತೆಗೆಯಲಾಗಿದೆ.
ಮತ್ತೊಂದೆಡೆ ಹಣಕಾಸು ವರ್ಷದಲ್ಲಿ ನಗದು ಬೇಡಿಕೆ ಉಳಿಸಿಕೊಳ್ಳಲು ಸೆಂಟ್ರಲ್ ಬ್ಯಾಂಕ್ 500 ರೂಪಾಯಿ ನೋಟುಗಳ ಮುದ್ರಣವನ್ನು ಹೆಚ್ಚಿಸಿದೆ. ಈಗ ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ ಶೇಕಡ 68.4 ರಷ್ಟು ಇದೆ. ಒಂದು ವರ್ಷದ ಮೊದಲು ಶೇಕಡ 60.80 ರಷ್ಟು ಇತ್ತು.
ಒಟ್ಟಾರೆಯಾಗಿ, ಚಲಾವಣೆ ಮೌಲ್ಯದ ಪ್ರಕಾರ, 500 ಮತ್ತು 2,000 ರೂ. ನೋಟುಗಳ ಪಾಲು ಮಾರ್ಚ್ 2021 ರ ವೇಳೆಗೆ ಶೇಕಡ 85.7 ರಷ್ಟಿದೆ. ಹಿಂದಿನ ವರ್ಷ ಶೇಕಡ 83.4 ರಷ್ಟಿತ್ತು. 2000 ರೂ. ದೊಡ್ಡ ಮೊತ್ತದ ನೋಟುಗಳು ಸಂಗ್ರಹಣೆಗೆ ಸುಲಭವಾಗಿರುವುದರಿಂದ ಅದನ್ನು ಚಲಾವಣೆಯಿಂದ ಹಂತ ಹಂತವಾಗಿ ಕಡಿಮೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
Laxmi News 24×7