ನಾಗ್ಪುರ: ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್(79) ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ‘ಹಮ್ ಆಪ್ಕೆ ಹೈ ಕೌನ್’ ಚಿತ್ರ ಸೇರದಂತೆ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿದ್ದ ರಾಮ್ ಲಕ್ಷ್ಮಣ್ ಅವರು ಮಹಾರಾಷ್ಟ್ರದ ನಾಗ್ಪುರದ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದರು.
ರಾಮ್ ಲಕ್ಷ್ಮಣ್ರ ನಿಧನಕ್ಕೆ ಭಾರತದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು ಸಂತಾಪ ಸೂಚಿಸಿದ್ದಾರೆ. ‘ಅತ್ಯಂತ್ಯ ಪ್ರತಿಭಾವಂತ ರಾಮ್ ಲಕ್ಷ್ಮಣ್ ಜಿ ನಿಧನ ಸುದ್ದಿ ಕೇಳಿ ನನಗೆ ಆಘಾತವಾಯಿತು. ಅವರ ಅನೇಕ ಹಾಡುಗಳನ್ನು ನಾನು ಹಾಡಿದ್ದೇನೆ. ಅವರಿಗೆ ನನ್ನ ನಮನಗಳು’ ಎಂದು ಟ್ವೀಟ್ ಮಾಡಿದ್ದಾರೆ.
1942ರ ಸೆಪ್ಟೆಂಬರ್ 16 ರಂದು ನಾಗ್ಪುರದಲ್ಲಿ ಜನಿಸಿದ್ದ ರಾಮ್ ಲಕ್ಷ್ಮಣ್( ವಿಜಯ್ ಪಾಟೀಲ್) ಅವರು ಹಿಂದಿ, ಮರಾಠಿ ಮತ್ತು ಭೋಜ್ಪುರಿಯ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದರಲ್ಲಿ ಮೈನೆ ಪ್ಯಾರ್ ಕಿಯಾ, ಹಮ್ ಆಪ್ಕೆ ಹೈ ಕೌನ್, ಹಮ್ ಸಾಥ್ ಸಾಥ್ ಹೈ ಸೇರಿದಂತೆ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ.