ಬೆಂಗಳೂರು: ನೂರಾರು ಅಮಾಯಕ ಜನರಿಗೆ ಚೀಟಿ ಹೆಸರಲ್ಲಿ ಯಾಮಾರಿಸಿ ಲಕ್ಷ ಲಕ್ಷ ಹಣ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವಶದಲ್ಲಿರುವ ವೆಂಕಟೇಶ ಬಾಬು, ಲೋಕೇಶ್ ಬಾಬು ಮತ್ತು ನಟರಾಜ ಬಾಬು ಎಂಬ ಐನಾತಿ ಸಹೋದರರು ಅಗರಬತ್ತಿ ಕಂಪನಿ, ನಟರಾಜ ಟ್ರೇಡರ್ಸ್, ಬಾಬು ಚಿಟ್ ಫಂಡ್ ಅಂತ ಬೋರ್ಡ್ ಹಾಕಿಕೊಂಡು ಸಾಕಷ್ಟು ವರ್ಷಗಳಿಂದ ಅಮಾಯಕ ಜನರನ್ನು ನಂಬಿಸಿ ಪ್ರತಿ ತಿಂಗಳು ಚೀಟಿ ಹಣ ಕಟ್ಟಿಸಿಕೊಂಡು ಯಾಮಾರಿಸಿದ್ದರು.
ಇಷ್ಟೇ ಅಲ್ಲದೆ, ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸೋ ಮಂಗಳಮುಖಿಯ ಬಳಿಯೂ ಬಿಡದೇ ಲಕ್ಷ ಲಕ್ಷ ರೂ. ಹಣ ಕೈ ಸಾಲ ಮಾಡ್ಕೊಂಡು ಯಾಮಾರಿಸಿದ್ದರು. ಈ ಬಾಬು ಬ್ರದರ್ಸ್ ಜನರಿಗೆ ಹಣ ಕೊಡುವ ಸಮಯಕ್ಕೆ ಹಣ ಕೊಡದೇ, ಕೆಲವರಿಗೆ ಚೆಕ್ಗಳನ್ನು ನೀಡಿ, ಕಳೆದ 5-6 ತಿಂಗಳಿಂದ ತಲೆಮರೆಸಿಕೊಂಡಿದ್ದರು.
ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸ್ರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ತಿಂಗಳೆಲ್ಲಾ ಕಷ್ಟಪಟ್ಟು ದುಡಿದು ತಪ್ಪದೆ ಪ್ರತಿ ತಿಂಗಳು ಇವರನ್ನ ನಂಬಿ ಚೀಟಿ ಹಣ ಕಟ್ಟುತ್ತಿದ್ದ ಜನ್ರ ಬದುಕು ಸದ್ಯ ಬೀದಿಗೆ ಬಿದ್ದಂತ್ತಾಗಿದ್ದು, ಸ್ಮಶನಕ್ಕೆ ಹೋದ ಹೆಣ, ಇಂತಹವರಿಗೆ ಕೊಟ್ಟ ಹಣ ಎಂದು ವಾಪಸ್ಸು ಬರೋಲ್ಲ ಅನ್ನೋ ಗಾದೆ ಮಾತಿನಂತಾಗಿದೆ. ಆದರೂ ಆರೋಪಿಗಳು ಸಿಕ್ಕಿಬಿದ್ದಿರುವುದಿಂದ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.