ಬೆಂಗಳೂರು, ಡಿ.9- ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಎಸ್‍ಇಪಿ-ಟಿಎಸ್‍ಪಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಪಕ್ಷಭೇದ ಮರೆತು ಶಾಸಕರು ವಿಧಾನಸಭೆಯಲ್ಲಿಂದು ಧರಣಿ ನಡೆಸಿ ಕೆಲಕಾಲ ಸದನ ಮುಂದೂಡಿದ ಪ್ರಸಂಗ ನಡೆಯಿತು.
ಶೂನ್ಯವೇಳೆಯಲ್ಲಿ ಶಾಸಕ ಪಿ.ರಾಜೀವ್ ಅವರು ಎಸ್‍ಇಪಿ-ಟಿಎಸ್‍ಪಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣ, ಮೆಟ್ರೋ, ಸ್ಟೀಲ್‍ಬ್ರಿಡ್ಜ್ ನಿರ್ಮಾಣ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದಾಗ, ಇದಕ್ಕೆ ದನಿಗೂಡಿಸಿದ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಹಣ ದುರುಪಯೋಗವಾಗುತ್ತಿದೆ ಎಂದರು.

ಈ ವೇಳೆ ಹಲವು ಸದಸ್ಯರು ಕಾಯ್ದೆಯ ಉಲ್ಲಂಘನೆ ಯಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವ ಬಿ.ಶ್ರೀರಾಮುಲು ಡೀಮ್ಡ್ ಎಕ್ಸ್‍ಪೆಂಡಿಚರ್ ಮಾಡಬಾರದೆಂದು ಹೇಳಿದ್ದೇನೆ. ಎಸ್‍ಇಪಿ-ಟಿಎಸ್‍ಪಿಯಲ್ಲಿ ಡೀಮ್ಡ್ ಎಕ್ಸ್‍ಪೆಂಡಿಚರ್ ಎಷ್ಟು ತೆಗೆದುಕೊಳ್ಳಬೇಕು, ಎಷ್ಟು ಬಿಟ್ಟುಕೊಡಬೇಕು ಎಂಬುದು ನಿರ್ಧಾರವಾಗಿಲ್ಲ. ಸಿಎಂ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಆಗ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಹಲವರು ಇದಕ್ಕೆ ಆಕ್ಷೇಪಿಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದರೂ ಸದಸ್ಯರು ಪಟ್ಟು ಹಿಡಿದಾಗ ಅರ್ಧ ಗಂಟೆಕಾಲ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.
Laxmi News 24×7