ಲಕ್ನೋ: ಪೊಲೀಸ್ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯ ಮರಣೋತ್ತರ ಪರೀಕ್ಷೆ ಬಂದಿದ್ದು, ವರದಿಯಲ್ಲಿ ಆತ ಪೊಲೀಸರ ಗುಂಡೇಟಿನಿಂದ ಸಾನ್ನಪ್ಪಿಲ್ಲ ಎಂದು ತಿಳಿದು ಬಂದಿದೆ.
ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.
ಪೊಲೀಸರನ್ನು ಕೊಂದಿದ್ದ ವಿಕಾಸ್ ದುಬೆಯನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಆದರೆ ದುಬೆ ಸಾವನ್ನಪ್ಪಿದ್ದು, ಪೊಲೀಸರು ಹೊಡೆದ ಗುಂಡೇಟಿನಿಂದಲ್ಲ. ಪೊಲೀಸರು ಗುಂಡು ಹೊಡೆದಾಗ ಆತ ಸತ್ತಿರಲಿಲ್ಲ. ಬದಲಿಗೆ ಪೊಲೀಸರು ಗುಂಡು ಹೊಡೆದಾಗ ಆತನಿಗೆ ತೀವ್ರ ರಕ್ತಸ್ರಾವವಾಗಿದೆ. ಜೊತೆಗೆ ಗುಂಡು ಬಿದ್ದ ತಕ್ಷಣ ಆತ ಶಾಕ್‍ಗೆ ಒಳಗಾಗಿದ್ದಾನೆ. ಹೀಗಾಗಿ ಆತ ರಕ್ತಸ್ರಾವ ಮತ್ತು ಶಾಕ್‍ನಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.
ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಗೆ ಬಲಿಯಾಗಿದ್ದ.