ಲಕ್ನೊ: ಗಾಲ್ವಾನಾ ವ್ಯಾಲಿಯಲ್ಲಿ ಚೀನಾ ಪುಂಡಾಟಿಕೆ ಮೆರೆದ ನಂತರ ಜನ ಚೀನಾ ವಸ್ತುಗಳನ್ನು ಬಹಿಷ್ಕರಿಸಲಾರಂಭಿಸಲಾಗುತ್ತಿದೆ. ನಂತರ ಭದ್ರತೆ ಉದ್ದೇಶದಿಂದ ಕೇಂದ್ರ ಸರ್ಕಾರ ಚೀನಿ ಮೂಲದ 59 ಆ್ಯಪ್‍ಗಳನ್ನು ಸಹ ಬ್ಯಾನ್ ಮಾಡಿ ಆದೇಶಿಸಿತು. ಇದೀಗ ಚೀನಾದಿಂದ ಬರುತ್ತಿದ್ದ ವಿವಿಧ ಶೈಲಿಗಳ ರಾಖಿಗಳ ರೀತಿಯಲ್ಲೇ ಭಾರತದ ಮಹಿಳೆ ತಮ್ಮದೇ ಮಹಿಳೆಯರ ಸಂಘ ಕಟ್ಟಿಕೊಂಡು ವಿವಿಧ ರೀತಿಯ ಬಣ್ಣ ಬಣ್ಣದ ಆಕರ್ಷಕ ರಾಖಿಗಳನ್ನು ತಯಾರಿಸುತ್ತಿದ್ದಾರೆ.
ಇನ್ನೇನು ರಕ್ಷಾ ಬಂಧನ ಸಮೀಪಿಸುತ್ತಿದ್ದು, ಆಗಲೇ ಬಣ್ಣ ಬಣ್ಣದ ರಾಖಿಗಳು ಸಿದ್ಧವಾಗುತ್ತಿವೆ. ಆಗಸ್ಟ್ 3 ರಂದು ರಕ್ಷಾ ಬಂಧನ ಹಿನ್ನೆಲೆ ಉತ್ತರ ಪ್ರದೇಶದ ಮಹಿಳೆ ತಮ್ಮದೇಯಾದ ಸಂಘದ ಮೂಲಕ ಚೀನಾ ರಾಖಿಗಳನ್ನು ನಾಚಿಸುವಂತೆ ಬಣ್ಣ ಬಣ್ಣ ಹಾಗೂ ವಿವಿಧ ಶೈಲಿಯ ರಾಖಿಗಳನ್ನು ತಯಾರಿಸುತ್ತಿದ್ದಾರೆ. ಆತ್ಮನಿರ್ಭರತೆಯ ಭಾಗವಾಗಿ ಮಹಿಳಾ ಸ್ವ ಸಹಾಯ ಸಂಘ ಈ ಕೆಲಸ ಮಾಡುತ್ತಿದ್ದು, ಉತ್ತರ ಪ್ರದೇಶದ ಸಂಗಮ್ ನಗರದ ಪ್ರಯಾಗ್‍ರಾಜ್‍ನಲ್ಲಿ ಸಂಘದಿಂದ ಬರೋಬ್ಬರಿ 5 ಲಕ್ಷ ರಾಖಿಗಳನ್ನು ತಯಾರಿಸಲಾಗುತ್ತಿದೆ.
ಆಗಸ್ಟ್ 3ರ ರಕ್ಷಾ ಬಂಧನದ ದಿನದಂದು ಮಾರಾಟ ಮಾಡಲು ಈ ರಾಖಿಗಳನ್ನು ತಯಾರಿಸಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದ ಸುಮಾರು 1,500 ಮಹಿಳೆಯರು ರಾಖಿ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರೇಷ್ಮೆ ಎಳೆಗಳು, ಮೆಟಲ್, ಲೋಹ, ಶ್ರೀಗಂಧದ ಕಟ್ಟಿಗೆ, ಗಾಜಿನ ಹಾಗೂ ಪ್ಲಾಸ್ಟಿಕ್ ಮಣಿಗಳು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಿ ರಾಖಿಗಳನ್ನು ತಯಾರಿಸಲಾಗುತ್ತಿದೆ. ರಾಖಿಗಳನ್ನು ಹಬ್ಬದ ಮುನ್ನಾದಿನಗಳಲ್ಲಿ ಅಂಗಡಿಗಳಿಗೆ ಹಾಗೂ ನಗರದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಈ ಕುರಿತು ಪ್ರಯಾಗ್ ವ್ಯಾಪಾರ ಮಂಡಳಿ(ಪಿವಿಎಂ)ಯ ವ್ಯಾಪಾರಸ್ಥರು ಸಹ ನಿರ್ಧಾರ ಕೈಗೊಂಡಿದ್ದು, ಈ ಬಾರಿ ಸ್ಥಳೀಯರು ತಯಾರಿಸಿದ ರಾಖಿಗಳನ್ನು ಮಾತ್ರ ನಾವು ಮಾರಾಟ ಮಾಡುತ್ತೇವೆ. ಇದಕ್ಕಾಗಿ ಈಗಾಗಲೇ ಮಹಿಳಾ ಸ್ವ ಸಹಾಯ ಸಂಘಗಳಿಗೆ ಆರ್ಡರ್ ಕೊಟ್ಟಿದ್ದೇವೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಈ ಕುರಿತು ಪಿವಿಎಂ ಅಧ್ಯಕ್ಷ ವಿಜಯ್ ಅರೋರಾ ಮಾಹಿತಿ ನೀಡಿ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ. ಭಾರತೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ತೀರ್ಮಾನ ಮಾಡಿದ್ದೇವೆ. ಈ ಬಾರಿಯ ಹಬ್ಬದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರು ತಯಾರಿಸಿದ ರಾಖಿಗಳನ್ನು ಮಾರುತ್ತೇವೆ. ಅದೇ ರೀತಿ ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಎಲ್ಲ ಹಬ್ಬಗಳಿಗೆ ಅಲಂಕಾರಿಕ ವಸ್ತುಗಳನ್ನು ಸ್ಥಳೀಯರಿಂದಲೇ ಕೊಂಡು ಮಾರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿ ಸುಮಾರು 200ಕ್ಕೂ ಹೆಚ್ಚು ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ರಾಖಿ ತಯಾರಿಸುವ ಕುರಿತು ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಮಿಷನ್ ವ್ಯವಸ್ಥಾಪಕ ಶರದ್ ಕುಮಾರ್ ಸಿಂಗ್ ಈ ಕುರಿತು ಮಾಹಿತಿ ನೀಡಿ, ಪ್ರಸ್ತುತ ಬಹಾರಿಯಾ ಹಾಗೂ ಕರ್ಚನಾ ಪ್ರದೇಶಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸೋಮವಾರದಿಂದ ಇತರ ಬ್ಲಾಕ್‍ಗಳಲ್ಲಿ ಸಹ ತರಬೇತಿ ಆರಂಭಿಸಲಾಗಿದೆ ಎಂದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಗ್ರಾಮೀಣ ಪ್ರದೇಶದ ಬಡ ಜನರಿಗೆ ಸ್ವಯಂ ಉದ್ಯೋಗ ಒದಗಿಸುವುದು ಇದರ ಉದ್ದೇಶವಾಗಿದೆ.