ಚಿಕ್ಕೋಡಿ(ಬೆಳಗಾವಿ): ಕಬ್ಬು ಬೆಳೆಗಾರರ ಪ್ರತಿಭಟನೆಗೆ ಮಣಿದು ಸರ್ಕಾರ 3,300 ರೂಪಾಯಿ ಕೊಡುವುದಾಗಿ ಘೋಷಿಸಿದೆ. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಹೆಚ್ಚಿಗೆ 50 ರೂಪಾಯಿ ಕೊಡುವುದಕ್ಕೆ ಬರುವುದಿಲ್ಲ ಎಂದಿದ್ದಾರೆ. ಅದು ನಮಗೆ ಗೊತ್ತಿಲ್ಲ, ಸರ್ಕಾರ ಘೋಷಿಸಿದಂತೆ ನಮಗೆ ಪ್ರತಿ ಟನ್ ಕಬ್ಬಿಗೆ 3,300 ದರ ನೀಡಬೇಕು ಎಂದು ರೈತ ಮುಖಂಡ ಚುನ್ನಪ್ಪ ಪೂಜಾರಿ ಈಟಿವಿ ಭಾರತ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದರು.
ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಕೇಳಿದ್ದೆವು, ಆದರೆ ಸರ್ಕಾರ 3,300 ಘೋಷಿಸಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ನಮಗೆ ಕೊಡುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದಾರೆ. ಸರ್ಕಾರ ನಿನ್ನೆ ಘೋಷಿಸಿದ ರೀತಿಯಲ್ಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಿಂದು ಮಧ್ಯಾಹ್ನ ಗುರ್ಲಾಪುರ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ನಮಗೆ ಅಧಿಕೃತವಾಗಿ ಪತ್ರ ನೀಡಬೇಕು. ಕಬ್ಬು ಬೆಳೆಗಾರರ ಹಲವು ಬೇಡಿಕೆ ಇರುವುದರಿಂದ ಸಿಎಂ ಹತ್ತಿರ ನಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಅವರು ಸ್ಥಳಕ್ಕೆ ಬರಲಿ ಚರ್ಚೆ ಮಾಡಲಾಗುವುದು ಎಂದರು.
ಕಬ್ಬು ಬೆಳೆಗಾರರ ಹಲವು ಬೇಡಿಕೆ ಇದ್ದು, ಸಚಿವರ ಮುಂದೆ ಪ್ರಸ್ತಾವನೆ ಮಾಡಲಾಗುವುದು. ಹಿಂದೆ ಸಚಿವರು ಪ್ರತಿ ಸಕ್ಕರೆ ಕಾರ್ಖಾನೆ ಮುಂದೆ ಸರ್ಕಾರದ ವತಿಯಿಂದ ತೂಕದ ಮೆಷಿನ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 30ಕ್ಕೂ ಹೆಚ್ಚು ಕಾರ್ಖಾನೆಗಳು ಇವೆ, ಆದರೆ ಏಳು ತೂಕದ ಮೆಷಿನ್ ಅಳವಡಿಸಲು ಸರ್ಕಾರ ಅನುಮತಿ ನೀಡಿದೆ. ಇದುವರೆಗೂ ಯಾವುದೇ ಮೆಷಿನ್ ಅಳವಡಿಕೆಯಾಗಿಲ್ಲ. ಆದಷ್ಟು ಬೇಗ ಕಬ್ಬು ತೂಕದ ಮೆಷಿನ್ ಅಳವಡಿಸಬೇಕು ಎಂದು ಆಗ್ರಹಿಸಿದರು.
ನಾವು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸುತ್ತೇವೆ. ಕಾರ್ಖಾನೆಗಳು ಸಕ್ಕರೆ ರಿಕವರಿಯಲ್ಲಿ ಮೋಸ ಮಾಡುತ್ತಿವೆ. ಈ ಕುರಿತ ಚರ್ಚೆ ಕೂಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಬೇಕು. ಆದಷ್ಟು ಬೇಗನೆ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಕಲ್ಲು ತೂರಾಟ, ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದ ಎಡಿಜಿಪಿ: ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಆರ್. ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಬೆಳಗಾವಿ ನಗರದ ಕೆಎಲ್ಇ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ಎಡಿಜಿಪಿ ಅವರು ಗಾಯಾಳುಗಳಿಗೆ ಧೈರ್ಯ ತುಂಬಿ, ಕಲ್ಲು ತೂರಾಟ ಘಟನೆ ಕುರಿತು ಮಾಹಿತಿ ಪಡೆದರು.
ಈ ವೇಳೆ ಐಜಿಪಿ ಚೇತನ್ ಸಿಂಗ್ ರಾಥೋಡ್, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು.
Laxmi News 24×7