Breaking News

ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಿಎಂ

Spread the love

ಬೆಳಗಾವಿ: ಕಿತ್ತೂರು ರಾಣಿ‌ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಬೆಳಗಾವಿ ವಿಮಾನ‌ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆದು ಒಂದು‌ ವರ್ಷವಾದರೂ ಕೇಂದ್ರ‌ ಸರ್ಕಾರ ಇದುವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.‌

ಕಿತ್ತೂರು ರಾಣಿ ಚನ್ನಮ್ಮ 1824ರ ಅಕ್ಟೋಬರ್ 23ರಂದು ಬ್ರಿಟಿಷರ ವಿರುದ್ಧ ಹೋರಾಡಿ ಜಯಗಳಿಸಿದ್ದರು. ಈ ವಿಜಯದ ಸವಿನೆನಪಿಗಾಗಿ ಪ್ರತೀ ವರ್ಷ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮುಂಚೆಯೇ ಬ್ರಿಟಿಷರ ವಿರುದ್ಧ ಚನ್ನಮ್ಮ ಹೋರಾಡಿದ್ದಾರೆ. ಶರಣಾಗತಿಯ ಬದಲು ಹೋರಾಟಕ್ಕೆ ಧುಮುಕಿದ ಚನ್ನಮ್ಮ, ರಾಯಣ್ಣ ಮತ್ತು ಅಮಟೂರ‌ ಬಾಳಪ್ಪನವರು ಸ್ವಾಭಿಮಾನದ ಸಂಕೇತ. ಥ್ಯಾಕರೆಯನ್ನು ಕೊಂದು ಬ್ರಿಟಿಷರ ವಿರುದ್ಧ ಜಯಗಳಿಸಿದ್ದು ಚನ್ನಮ್ಮನ ಸಾಧನೆಯ‌ ಕಿರೀಟ ಎಂದು ಬಣ್ಣಿಸಿದರು.

ಸಂಗೊಳ್ಳಿ ರಾಯಣ್ಣನನ್ನು ಹಿಡಿಯಲು ನಮ್ಮವರೇ ನೀಡಿದ‌ ಮಾಹಿತಿಯು ಬ್ರಿಟಿಷರಿಗೆ ಅನುಕೂಲವಾಗಿತ್ತು. ಚನ್ನಮ್ಮನ ಹೋರಾಟದ ಬಗ್ಗೆ ನಾಡಿಗೆ ತಿಳಿಸುವುದಕ್ಕಾಗಿ 2017ರಲ್ಲಿ ನಮ್ಮ ಸರ್ಕಾರವೇ ಕಿತ್ತೂರು ಚೆನ್ನಮ್ಮ ಜಯಂತಿ ಆರಂಭಿಸಿತು ಎಂಬುದು‌ ನಮಗೆ ಹೆಮ್ಮೆಯ ವಿಷಯ. ಚನ್ನಮ್ಮನ ಸಾಹಸಗಾಥೆ ತಿಳಿಸಲು ಜಯಂತಿ ಆರಂಭಿಸಲಾಯಿತೇ ಹೊರತು ರಾಜಕೀಯ ಕಾರಣಕ್ಕಲ್ಲ. ಚನ್ನಮ್ಮನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತೆ ಎಂದು ಸಿಎಂ ಹೇಳಿದರು.

ಸಮಾಜ ಒಡೆಯುವವರ ಬಗ್ಗೆ ಎಚ್ಚರ- ಸಿಎಂ: ಟಿಪ್ಪು ಸುಲ್ತಾನ್ ಕೂಡ ವೀರಾವೇಷದಿಂದ ಬ್ರಿಟಿಷರ ವಿರುದ್ಧ ಹೋರಾಡಿದ್ದರು.‌ ಇದನ್ನು ಹೇಳಿದರೆ ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಟಿಪ್ಪು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಯುದ್ಧಭೂಮಿಯಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತದೆ. ಯಾವುದೇ ಧರ್ಮದಲ್ಲಿಯೂ ದ್ವೇಷವನ್ನು ಬೋಧಿಸಿಲ್ಲ. ಆದ್ದರಿಂದ ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು. ಸಮಾಜ ಒಡೆಯುವಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ವೀರಮಾತೆ ಜಯಂತ್ಯೋತ್ಸವ ಆಚರಣೆಯ 25 ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸಿದರು. ಇದಲ್ಲದೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು‌ ಘೋಷಿಸಿದ್ದು ಅವರೇ.
ಚನ್ನಮ್ಮನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿರುವುದು ಕೂಡ ಸಿದ್ದರಾಮಯ್ಯನವರು. ಆದ್ದರಿಂದ ಸಮಾಜದ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಶಾಸಕರಿಂದ ಹಲವು ಬೇಡಿಕೆ: ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, ಚನ್ನಮ್ಮನ ಇತಿಹಾಸವನ್ನು ದೇಶದ ಜನತೆಗೆ ಮುಟ್ಟಿಸಲು ಪ್ರತೀ ವರ್ಷ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಚನ್ನಮ್ಮನ ಕಿತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ. ಕಿತ್ತೂರಿನ ಐತಿಹಾಸಿಕ ಸ್ಥಳಗಳ ಜೀರ್ಣೊದ್ಧಾರಕ್ಕೆ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಮಲಪ್ರಭಾ ಸಹಕಾರಿ ಕಾರ್ಖಾನೆ‌ ದುಸ್ಥಿತಿಯಲ್ಲಿದ್ದು, ರೈತರ ಅನುಕೂಲಕ್ಕಾಗಿ‌ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಹಾಗೂ ಕಿತ್ತೂರಿನ ಐತಿಹಾಸಿಕ ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.


Spread the love

About Laxminews 24x7

Check Also

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಡೇಟ್ ಫಿಕ್ಸ್: ಬಸವರಾಜ ಹೊರಟ್ಟಿ

Spread the loveಧಾರವಾಡ, ಅಕ್ಟೋಬರ್​ 25: ಡಿಸೆಂಬರ್​ 8ಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗುತ್ತೆ ಎಂದು ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ