ಬೆಂಗಳೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅನರ್ಹ ವ್ಯಕ್ತಿಯೊಬ್ಬರು ಕಳೆದ 2018ರಿಂದ ಕಂಟ್ರೋಲರ್ ಹುದ್ದೆ ನಿರ್ವಹಿಸಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಕಳೆದ 2018ರಿಂದ 2025ರವರೆಗೂ ವಿವಿಯ ಎಲ್ಲ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ನಡೆಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್-ಕರ್ನಾಟಕ (ಸಿಎಜಿ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಲೆಕ್ಕಪರಿಶೋಧನೆ ಸಮಯದಲ್ಲಿ ಯಾವುದೇ ಅಕ್ರಮ ಮತ್ತು ಹಣಕಾಸಿನ ದುರುಪಯೋಗ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿದೆ.
ವಿವಿಯ ಕಂಟ್ರೋಲರ್ ಸ್ಥಾನಕ್ಕೆ ಪೂಜಾ ದೊಡ್ಡಮನಿ ಎಂಬವರನ್ನು ನೇಮಕ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ, ಕಳೆದ 2018ರ ಜೂನ್ 2ರಿಂದ ವಿವಿಯ ಉಸ್ತುವಾರಿ ಕಂಟ್ರೋಲರ್ ಆಗಿ ಸೇವೆ ಸಲ್ಲಿಸಿದ್ದ ಶಿವಪುತ್ರ ಎಂ.ಹೊನ್ನಾಳಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ, ಈ ಸೂಚನೆ ನೀಡಿ ಅರ್ಜಿ ವಜಾಗೊಳಿಸಿತು.
ಅರ್ಜಿದಾರರ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ಲೆಕ್ಕಪತ್ರ ನಿಯಂತ್ರಕರ ಕೇಡರ್‌ಗೆ ಸೇರಿಲ್ಲ. ಇಲ್ಲವೇ ಕೃಷಿ ವಿಶ್ವವಿದ್ಯಾಲಯ ಕಾಯ್ದೆ(ಯುಎಎಸ್ ಆ್ಯಕ್ಟ್)ಯಲ್ಲಿ ನಿಗದಿಪಡಿಸಿರುವಂತೆ ಲೆಕ್ಕಪತ್ರ ಇಲಾಖೆಯ ಉಪ ಲೆಕ್ಕಪತ್ರ ಜನರಲ್ ದರ್ಜೆಯ ಅಧಿಕಾರಿಯಾಗಿಲ್ಲ. ಆದ ಕಾರಣ ಕಂಟ್ರೋಲರ್ ಹುದ್ದೆ ಹೊಂದಲು ಅರ್ಹರಲ್ಲ. ವಿವಿಯಲ್ಲಿ ಉಸ್ತುವಾರಿ ಕಂಟ್ರೋಲರ್ ಹುದ್ದೆ ಕೇವಲ ಆರು ತಿಂಗಳಿಗೆ ಸೀಮಿತವಾಗಿರಬೇಕು. ಒಂದು ವೇಳೆ ಕಾಯ್ದೆಯ ಸೆಕ್ಷನ್ 31(9)(a)ರ ಅಡಿಯಲ್ಲಿ ಎಲ್ಲ ನಿಯಮಗಳನ್ನು ಅನುಸರಿಸಿ ಕಂಟ್ರೋಲರನ್ನು ನೇಮಕ ಮಾಡಿದರೂ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಅದೇ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ ಎಂಬುದಾಗಿ ತಿಳಿಸಲಾಗಿದೆ. ಆದರೆ, ಅರ್ಜಿದಾರರ ಶಿವಪುತ್ರ ಅವರು 2018ರಿಂದ ಈವರೆಗೂ ಅಂದರೆ ಏಳು ವರ್ಷಗಳ ಕಾಲ ಉಸ್ತುವಾರಿ ಕಂಟ್ರೋಲರ್ ಆಗಿಯೇ ಮುಂದುವರೆದಿದ್ದಾರೆ. ಈ ಅಂಶ ಸಂಶಯಕ್ಕೆ ಕಾರಣವಾಗಲಿದ್ದು, ಲೆಕ್ಕಪರಿಶೋಧನೆಗೆ ಆದೇಶಿಸುತ್ತಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅಷ್ಟೇ ಅಲ್ಲದೆ, ಕಂಟ್ರೋಲರ್ ಹುದ್ದೆ ಹೊಂದಲು ಅರ್ಹವಿರುವ ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ನಿರ್ವಹಣಾ ಮಂಡಳಿ ಸಲ್ಲಿಸಿಲ್ಲ. ಅರ್ಜಿದಾರರನ್ನು ಕಂಟ್ರೋಲರ್ ಆಗಿ ನೇಮಕ ಮಾಡುವುದಕ್ಕೆ ಮಂಡಳಿ ಅನುಮೋದನೆ ನೀಡಿಲ್ಲ. ಆದ್ದರಿಂದ ಅರ್ಜಿದಾರರ ಕಂಟ್ರೋಲರ್ ಹುದ್ದೆಗೆ ನೇಮಿಸಲು ಅಗತ್ಯ ನಿಯಮಗಳನ್ನು ಅನುಸರಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಅಲ್ಲದೆ, ಶಿವಪುತ್ರ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ವಿವಿಯ ಲೆಕ್ಕ ಪರಿಶೋಧನೆಗಾಗಿ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ಕಂಟ್ರೋಲರ್ ವೃಂದದ ಅಧಿಕಾರಿಗಳು ಅಥವಾ ಲೆಕ್ಕಪರಿಶೋಧನೆ ಇಲಾಖೆಯ ಸಹಾಯಕ ಅಕೌಂಟೆಂಟ್ ಜನರಲ್ ಶ್ರೇಣಿಯ ಅಧಿಕಾರಿಯಾಗಿರುವ ಕನಿಷ್ಠ ಮೂರು ವ್ಯಕ್ತಿಗಳ ಸಮಿತಿ ರಚನೆ ಮಾಡಬೇಕು ಎಂದು ವಿವಿಯ ಕುಲಪತಿಗೆ ನಿರ್ದೇಶನ ನೀಡಿರುವ ಹೈಕೋರ್ಟ್, ಈ ಸಮಿತಿಯನ್ನು ವಿವಿಯ ನಿರ್ವಹಣಾ ಮಂಡಳಿಯ ಮುಂದೆ ಮಂಡಿಸಬೇಕು. ಮಂಡಳಿಯು ಸಮಿತಿಯಲ್ಲಿರುವ ಯಾವುದೇ ಅಭ್ಯರ್ಥಿಗಳನ್ನು ಒಪ್ಪಿಕೊಂಡರೆ ಕುಲಪತಿ ಅನುಮೋದಿತ ಅಭ್ಯರ್ಥಿಯನ್ನು ಕಂಟ್ರೋಲರ್ ಆಗಿ ನೇಮಕ ಮಾಡಬಹುದು. ಅಲ್ಲಿಯವರೆಗೂ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಪೂಜಾ ದೊಡ್ಡಮನಿ ಅವರು ಕಾನೂನಿನ ಪ್ರಕಾರವಾಗಿ ಉಸ್ತುವರಿ ಕಂಟ್ರೋಲರ್ ಆಗಿ ತಮ್ಮ ಕರ್ತವ್ಯ ನಿರ್ವಹಿಸಬಹುದು ಎಂದು ಪೀಠ ಹೇಳಿದೆ.