ಪೂರ್ವಿಕಾಳ ತಲೆಗೆ ಹರಿತವಾದ ಆಯುಧದಿಂದ ಹೊಡೆದಿದ್ದರಿಂದ ತಲೆಯ ಚಿಪ್ಪಿನ ಅರ್ಧ ಭಾಗ ಹಾರಿ ಹೋಗಿದೆ. ಬಾಲಕಿ ಮಲಗಿದ್ದ ವೇಳೆ ಶೃತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮಗಳನ್ನು ಕೊಂದ ನಂತರ ತನ್ನ ತಪ್ಪಿನ ಅರಿವಾಗಿ ಶೃತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ರಾಮಣ್ಣ ಮೂಲತಃ ದಾವಣಗೆರೆ ಜಿಲ್ಲೆಯ ಮಾಯಕೊಂಡ ತಾಲೂಕಿನ ನರಗನಹಳ್ಳಿ ನಿವಾಸಿ. ರಾಮಣ್ಣ ತನ್ನ ಸ್ವಂತ ಅಕ್ಕನ ಮಗಳನ್ನೇ ಮದುವೆಯಾಗಿದ್ದರು. ಮೃತ ಶೃತಿಯ ತಂದೆ, ತಾಯಿ ಸೇರಿದಂತೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಆಗಮಿಸಿ, ಪರಿಶೀಲಿಸಿದ್ದಾರೆ. ಮೃತ ಶೃತಿ ತಂದೆ ರಂಗಪ್ಪ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶೃತಿ: ಸ್ಥಳೀಯರಾದ ವಿರೂಪಾಕ್ಷಪ್ಪ ಮಾತನಾಡಿ, “ರಾಮಣ್ಣ ಒಳ್ಳೆಯ ವ್ಯಕ್ತಿ. ಅವರು ನಿನ್ನೆ ರಾತ್ರಿ ನೈಟ್ ಡ್ಯೂಟಿಗೆ ಹೋಗಿದ್ದಾರೆ. ರಾತ್ರಿ 10 ಗಂಟೆಗೆ ಮಗಳು ರಾಮಣ್ಣಗೆ ಕರೆ ಮಾಡಿ, ಅಮ್ಮ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ ಮನೆಗೆ ಬಂದು ಹೋಗಿ ತಿಳಿಸಿದ್ದಳು. ಆದರೆ, ರಾಮಣ್ಣ ಡ್ಯೂಟಿಯಲ್ಲಿದ್ದ ಕಾರಣಕ್ಕೆ ಮನೆಗೆ ಬಂದಿಲ್ಲ. ಬೆಳಗ್ಗೆ ಮನೆಗೆ ಬಂದಾಗ ಬಾಗಿಲು ತೆಗೆಯದೇ ಇದ್ದುದರಿಂದ ಕಿಟಕಿಯಿಂದ ನೋಡಿದಾಗ ಶೃತಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮನೆ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಪೂರ್ವಿಕಾ ಮೃತದೇಹ ಕಾಣಿಸಿದೆ. ಶೃತಿ ಮಾನಸಿಕ ಖಿನ್ನತೆ ಬಳಲುತ್ತಿದ್ದರಂತೆ. ಇಂದು ಶೃತಿ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ರಾಮಣ್ಣ ನೈಟ್ ಡ್ಯೂಟಿ ಮುಗಿಸಿಕೊಂಡು ಬರುಷ್ಟರಲ್ಲೇ ಈ ದುರ್ಘಟನೆ ನಡೆದಿದೆ” ಎಂದು ತಿಳಿಸಿದರು.
ಎಸ್ಪಿ ಹೇಳಿದ್ದೇನು?: ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, “ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಮರ್ಡರ್ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 12 ವರ್ಷ ವಯಸ್ಸಿನ ಬಾಲಕಿ ಪೂರ್ವಿಕಾ ತಲೆ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಹಾಗೂ ಗಲ್ಲ, ಮುಖದ ಭಾಗಕ್ಕೆ ಗಾಯ ಮಾಡಲಾಗಿದೆ. ಅದೇ ದೇಹದ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶೃತಿ ಎಂಬವರ ಮೃತದೇಹ ಸಿಕ್ಕಿದೆ. ಮೃತ ಶೃತಿ, ಪೂರ್ವಿಕಾಳ ತಾಯಿ ಆಗಿದ್ದಾರೆ” ಎಂದರು.
“ಮೆಗ್ಗಾನ್ ಆಸ್ಪತ್ರೆಯಲ್ಲಿ ರಾಮಣ್ಣ ಎಂಬವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಎರಡು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸಿದಾಗ ಸತ್ಯಾಂಶ ಹೊರಬರಲಿದೆ. ರಾಮಣ್ಣ ನಿನ್ನೆ ರಾತ್ರಿ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆ ಮನೆಗೆ ಬಂದಾಗ ಬಾಗಿಲು ತೆಗೆಯುವುದಿಲ್ಲ. ಇದರಿಂದ ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ತಕ್ಷಣ ದೊಡ್ಡಪೇಟೆ ಪೊಲೀಸರಿಗೆ ತಿಳಿಸಿದ್ದಾರೆ. ನಾನು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶೃತಿ ವೈದ್ಯಕೀಯ ಚಿಕಿತ್ಸೆಯಲ್ಲಿದ್ದರು ಎಂದು ರಾಮಣ್ಣ ತಿಳಿಸಿದ್ದಾರೆ. ತನಿಖೆಯಲ್ಲಿ ಶೃತಿ ಯಾವ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಪರಿಶೀಲನೆ ನಡೆಸಿ, ವೈದ್ಯರ ಸಲಹೆಯನ್ನು ಪಡೆದುಕೊಳ್ಳುತ್ತೇವೆ” ಎಂದು ತಿಳಿಸಿದರು.